Home Mangalorean News Kannada News ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಅಪಘಾತ: CISF ಯೋಧ ಮೃತ

ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಅಪಘಾತ: CISF ಯೋಧ ಮೃತ

Spread the love

ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಅಪಘಾತ: CISF ಯೋಧ ಮೃತ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಸಮೀಪ ಬುಧವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF)ಯ ಯೋಧರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಮೃತರನ್ನು ಕೊಯಿಲಾ ನಿವಾಸಿ ಸೀತಾರಾಮ ಗೌಡ ಎಂದು ಗುರುತಿಸಲಾಗಿದೆ. ಇವರು CISFನಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಜಮ್ಮುವಿನ ಸೆಂಟ್ರಲ್ ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜು.3ರಂದು ರಜೆಯ ಮೇಲೆ ಊರಿಗೆ ಬಂದಿದ್ದರು.

ಜು.7ರಂದು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ದಾಖಲಾತಿ ನೀಡುವ ಸಲುವಾಗಿ ತಮ್ಮ ಊರು ಕೊಯಿಲಾಕ್ಕೆ ತೆರಳಿದ್ದರು. ಜು.8ರಂದು ಮಧ್ಯಾಹ್ನ KA-21-K-7558 ಸಂಖ್ಯೆಯ ಮೋಟಾರ್ಸೈಕಲ್ನಲ್ಲಿ ಕೊಯಿಲಾದಿಂದ ಹೊರಟು ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಸಮೀಪದ ರೆಡಿಯಂಟ್ ಸ್ಟಾರ್ ಹೋಟೆಲ್ ಬಳಿ ಸಂಜೆ ಸುಮಾರು 3.40ಕ್ಕೆ ತಲುಪಿದ ವೇಳೆ ಅಪಘಾತ ಸಂಭವಿಸಿದೆ.

ಈ ವೇಳೆ ಸೀತಾರಾಮ ಗೌಡ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಎ.ಜೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತರ ಪತ್ನಿ ರೋಹಿಣಿ ಅವರಿಗೆ ದೂರವಾಣಿ ಕರೆ ಮೂಲಕ ಅಪಘಾತದ ಮಾಹಿತಿ ನೀಡಲಾಗಿತ್ತು. ಬಳಿಕ ಅವರು ಆಸ್ಪತ್ರೆಗೆ ತೆರಳಿ ವಿಚಾರಿಸಿದಾಗ ಪತಿ ಮೃತಪಟ್ಟಿರುವ ವಿಷಯ ತಿಳಿದುಬಂದಿದೆ. ಇದೇ ವೇಳೆ ಮಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಪಿರ್ಯಾದಿದಾರರ ಅಕ್ಕನ ಮಗ ಲಿಖಿತ್ ಅವರು ಆಸ್ಪತ್ರೆಗೆ ಬರುವ ದಾರಿಯಲ್ಲಿ ಅಪಘಾತ ಸ್ಥಳವನ್ನು ಪರಿಶೀಲಿಸಿ, ಘಟನೆಯ ಮಾಹಿತಿ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸೀತಾರಾಮ ಗೌಡ ಅವರ ಬೈಕ್ ಸ್ವಯಂ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಬಿದ್ದಿದೆಯೇ ಅಥವಾ ಬೇರೆ ಯಾವುದಾದರೂ ವಾಹನ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆಯೇ ಎಂಬ ಕುರಿತು ಸಮಗ್ರ ತನಿಖೆ ನಡೆಸಿ, ಮೃತದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ಹಸ್ತಾಂತರಿಸುವಂತೆ ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


Spread the love

Exit mobile version