ರಾಹುಲ್‌ ಕುರಿತು ಟೀಕೆ ಮಾಡುವ ನೈತಿಕತೆ ನಳಿನ್‌ ಕುಮಾರ್‌ ಗಿಲ್ಲ – ವಿನೋದ್‌ ಕ್ರಾಸ್ಟೋ

Spread the love

ರಾಹುಲ್‌ ಕುರಿತು ಟೀಕೆ ಮಾಡುವ ನೈತಿಕತೆ ನಳಿನ್‌ ಕುಮಾರ್‌ ಗಿಲ್ಲ – ವಿನೋದ್‌ ಕ್ರಾಸ್ಟೋ

ಕುಂದಾಪುರ: ದೇಶದಲ್ಲಿ ಪ್ರಸ್ತುತ ಅತ್ಯಂತ ಜನಪರವಾಗಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿರುವ, ದೇಶದ ರಾಜಕೀಯದ ಭವಿಷ್ಯದ ಆಶಾಕಿರಣ ಎಂದೇ ಬಿಂಬಿತವಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕುರಿತು ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮಾಡಿರುವ ಟೀಕೆಗಳು ಅತ್ಯಂತ ಕೀಳು ಮಟ್ಟದ್ದಾಗಿವೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಪತ್ರಿಕಾ ಹೇಳಿಕೆಯ ಮೂಲಕ ಖಂಡಿಸಿದ್ದಾರೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷದ ಸರ್ಕಾರದ ಜನವಿರೋಧಿ, ರೈತವಿರೋಧಿ, ಸ್ತ್ರೀ ವಿರೋಧಿ ಧೋರಣೆಗಳನ್ನು ರಾಹುಲ್ ಗಾಂಧಿ ಸತತವಾಗಿ ಟೀಕಿಸುತ್ತಲೇ ಬಂದಿದ್ದಾರೆ. ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಸ್ತ್ರೀಯರ ವಿರುದ್ಧ ದೌರ್ಜನ್ಯ, ರೈತರ ಕಗ್ಗೊಲೆಗಳ ಸಂದರ್ಭದಲ್ಲಿ ಸಂತ್ರಸ್ತರ ಪರವಾಗಿ ನಿಂತು ಹೋರಾಟ ನಡೆಸುತ್ತಿದ್ದಾರೆ. ದೇಶದ ಇಂದಿನ ಜ್ವಲಂತ ಸಮಸ್ಯೆಗಳ ಕುರಿತು ಕೇಂದ್ರದ ಬಿಜೆಪಿ ಸರ್ಕಾರ ಸಂಪೂರ್ಣ ಸಂವೇದನಾ ಶೂನ್ಯವಾಗಿರುವ ಸಂದರ್ಭದಲ್ಲಿ ಜನರ ನೋವುಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ಸಂವೇದನಾಶೀಲ ನಾಯಕ ರಾಹುಲ್ ಗಾಂಧಿಯ ಕುರಿತು ಬಿಜೆಪಿ ನಾಯಕರಿಗೆ ಹೆಚ್ಚಾಗುತ್ತಿರುವ ಅಸಹನೆಯನ್ನು ಈ ರೀತಿ ಅವಹೇಳನ ಮಾಡುವ ಮೂಲಕ ಬಿಜೆಪಿ ನಾಯಕರು ಹೊರಹಾಕುತ್ತಿದ್ದಾರೆ.

ದೇಶದ ಸರ್ವತೋಮುಖ ಬೆಳವಣಿಗಾಗಿ ಬಲಿದಾನಗಳನ್ನೂ ನೀಡಿರುವ, ಗಾಂಧಿ ಕುಟುಂಬದ ಕುಡಿಯಾಗಿರುವ ರಾಹುಲ್ ಗಾಂಧಿ ಕುರಿತ ಟೀಕೆ ಮಾಡುವ ಸಣ್ಣ ನೈತಿಕತೆ ಕೂಡ ನಳಿನ್ ಕುಮಾರ್‍ಗೆ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿರುವ ವಿನೋದ್ ಕ್ರಾಸ್ಟೋ ಅವರು, ಈ ವಿವಾದಾತ್ಮಕ ಹೇಳಿಕೆಗಾಗಿ ನಳಿನ್ ಕುಮಾರ್ ಕ್ಷಮೆ ಯಾಚಿಸಬೇಕು ಎನ್ನುವ ಪಕ್ಷದ ಆಗ್ರಹಕ್ಕೆ ಧ್ವನಿಗೂಡಿಸಿದ್ದಾರೆ.


Spread the love