ರಾಹುಲ್‌ ಕುರಿತು ನಳಿನ್‌ ವಿವಾದಾತ್ಮಕ ಹೇಳಿಕೆ – ದಕ ಜಿಲ್ಲಾ ಯುವ ಕಾಂಗ್ರೆಸ್‌ ಪ್ರತಿಭಟನೆ

Spread the love

ರಾಹುಲ್‌ ಕುರಿತು ನಳಿನ್‌ ವಿವಾದಾತ್ಮಕ ಹೇಳಿಕೆ – ದಕ ಜಿಲ್ಲಾ ಯುವ ಕಾಂಗ್ರೆಸ್‌ ಪ್ರತಿಭಟನೆ

ಮಂಗಳೂರು: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರತಿಕೃತಿ ದಹಿಸಿ ಬುಧವಾರ ನಗರದ ಮಲ್ಲಿಕಟ್ಟೆ ಕಾಂಗ್ರೆಸ್ ಭವನದ ಎದುರು ಪ್ರತಿಭಟನೆ ನಡೆಸಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಉನ್ನತ ವ್ಯಕ್ತಿಗಳು ಸಂಸದರಾಗಿ ಸೇವೆ ಸಲ್ಲಿಸಿ ಜಿಲ್ಲೆಗೆ ಅಪಾರ ಅಭಿವೃದ್ಧಿ ಕೊಡುಗೆಗಳನ್ನು ನೀಡಿದ್ದಾರೆ. ಕಳೆದ ಮೂರು ಅವಧಿಗಳಿಂದ ಸಂಸದರಾಗಿರುವ ನಳಿನ್ ಕುಮಾರ್ ಜಿಲ್ಲೆಯಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ? ಜಿಲ್ಲೆಯ ಯುವ ಜನತೆಗೆ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ಯಾವುದೇ ಕೊಡುಗೆಯನ್ನು ನೀಡಲು ಅವರಿಂದ ಸಾಧ್ಯವಾಗಿಲ್ಲ. ಬುದ್ಧಿವಂತರ ಜಿಲ್ಲೆ ಎನಿಸಿರುವ ನಮ್ಮ ಜಿಲ್ಲೆಗೆ ನಳಿನ್ ಕುಮಾರ್ ಕಟೀಲ್ ನಾಚಿಕೆಗೇಡಿನ ಸಂಕೇತರಾಗಿದ್ದಾರೆ ಎಂದು ಹೇಳಿದರು.

ಮಾನಸಿಕ ಅಸ್ವಸ್ಥರಂತೆ ಹೇಳಿಕೆ ನೀಡುವ ನಳಿನ್ ಕುಮಾರ್ ಗೆ ಚಿಕಿತ್ಸೆಯ ಅವಶ್ಯಕತೆಯಿದ್ದು, ಯುವ ಕಾಂಗ್ರೆಸ್ ವೆಚ್ಚವನ್ನು ಭರಿಸಲಿದೆ. ದೇಶಕ್ಕಾಗಿ ಹೋರಾಟ ನಡೆಸಿದ ಪ್ರಾಣಾರ್ಪಣೆ ಮಾಡಿದ ಗಾಂಧಿ ಕುಟುಂಬದ ಬಗ್ಗೆ ಮಾತನಾಡುವ ಯೋಗ್ಯತೆ ನಳಿನ್ ಕುಮಾರ್‌ಗಿಲ್ಲ. ತನ್ನ ಕುರ್ಚಿಯನ್ನು ಉಳಿಸಿಕೊಳ್ಳಲು ದೆಹಲಿಯ ನಾಯಕರನ್ನು ಮೆಚ್ಚಿಸಿಕೊಳ್ಳಲು ನಳಿನ್ ಕುಮಾರ್ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಖಂಡನೀಯ. ಅವರು ಕೂಡಲೇ ಕ್ಷಮಾಪಣೆ ಕೇಳಬೇಕು ಹಾಗೂ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಮನ್ನಾರ್ ಮನ್ನನ್, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ಘಟಕದ ಅಧ್ಯಕ್ಷ ವಿಶ್ವಾಸ್ ದಾಸ್ ಮಾತನಾಡಿದರು. ಮನಾಪ ಸದಸ್ಯ ಶಂಶುದ್ದೀನ್, ಮುಲ್ಕಿ ಬ್ಲಾಕ್ ಅಧ್ಯಕ್ಷ ಮೋಹನ್ ಕೋಟ್ಯಾನ್, ರಾಜ್ಯ ಹಿಂದುಳಿದ ಘಟಕದ ಕಾರ್ಯದರ್ಶಿ ಗಣೇಶ್ ಪೂಜಾರಿ, ಪ್ರವೀಣ್ ಬೊಳ್ಳುರು, ಚಂದ್ರ ಶೇಖರ್ ಪಕ್ಷಿಕೆರೆ, ಆರೀಫ್ ಬಾವ ಬಂದರ್, ಸಲೀಂ ಮುಕ್ಕ, ರಮಾನಂದ ಪೂಜಾರಿ ಕಟೀಲ್, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸರ್ಫರಾಜ್ ನವಾಝ್, ಜಿಲ್ಲಾ ಉಪಾಧ್ಯಕ್ಷರಾದ ಅಭಿಷೇಕ್ ಬೆಳ್ಳಿಪ್ಪಾಡಿ, ಸೌಮ್ಯಲತಾ, ಪ್ರಧಾನ ಕಾರ್ಯದರ್ಶಿಗಳಾದ ರಮಾನಂದ ಪೂಜಾರಿ, ನವಾಲ್ ಬಿ.ಕೆ, ನವೀದ್ ಅಖ್ತರ್, ರಂಜಿತ್ ಬಂಗೇರ, ಪ್ರಸಾದ್ ಗಾಣಿಗ, ಅನೂಪ್ ಬಂಗೇರ, ಫೈಝಲ್ ಕಡಬ, ಅಶ್ವಥ್ ರಾಜ್, ಮೊಹಮ್ಮದ್ ಇರ್ಷಾದ್, ವೈಭವ್ ಶೆಟ್ಟಿ, ಜಿನ್ನಾ ಲೇನಿಟ್ ಲೋಬೋ, ಕವಿತಾ, ಉಮೈ ಬಾನು, ಬ್ಲಾಕ್ ಅಧ್ಯಕ್ಷರಾದ ನವಾಝ್ ನರಿಂಗಾನ, ಮೊಹಮ್ಮದ್ ಮುಫೀದ್, ಶಾಹುಲ್ ಹಮೀದ್, ಉಪಾಧ್ಯಕ್ಷರಾದ ಸೌಹಾನ್ ಎಸ್ಕೆ, ಇಸ್ಮಾಯಿಲ್ ಸಿದ್ದೀಕ್, ಫಯಾಜ್ ಅಮ್ಮೇಮಾರ್, ಇಸ್ಮಾಯಿಲ್, ಸಫ್ವನ್, ಸಾಮ್ರಾನ್ ಉಪಸ್ಥಿತರಿದ್ದರು.


Spread the love