ರಾಹುಲ್‌ ಗಾಂಧಿ ಪಾದಯಾತ್ರೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ಯಡಿಯೂರಪ್ಪ

Spread the love

ರಾಹುಲ್‌ ಗಾಂಧಿ ಪಾದಯಾತ್ರೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ಯಡಿಯೂರಪ್ಪ
 

ರಾಮನಗರ: ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆದಿರುವ ಕಾಂಗ್ರೆಸ್‌ ಪಾದಯಾತ್ರೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಯಾರು ಏನೇ ಬೊಬ್ಬೆ ಹೊಡೆದರೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ತಾಲ್ಲೂಕಿನ ಹರಿಸಂದ್ರ ಗ್ರಾಮದಲ್ಲಿ ಭಾನುವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ‘ ಕೆಲವರು ನಾನೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳುತ್ತಿದ್ದಾರೆ. ಅದೆಲ್ಲವೂ ಸಾಧ್ಯವಿಲ್ಲ. ನಾಡಿದ್ದರಿಂದ ಬಿಜೆಪಿ ರಾಜ್ಯ ಪ್ರವಾಸ ಆರಂಭ ಆಗಲಿದ್ದು, ನಾನು ಹಾಗೂ ಬಸವರಾಜ ಬೊಮ್ಮಾಯಿ 50 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದೇವೆ’ ಎಂದರು.

2023ಕ್ಕೆ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿ ‘ ಅವರು ಹಿರಿಯರಿದ್ದಾರೆ. ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡುವುದಿಲ್ಲ. ಮಗನ ಮೇಲಿನ ಮಮತೆಗೆ ಆ ಮಾತು ಹೇಳಿದ್ದಾರೆ. ಅದನ್ನು ಬೇಡ ಎನ್ನಲು ನಾವ್ಯಾರು’ ಎಂದರು.

ಭಾರತ್‌ ಜೋಡೊ ಯಾತ್ರೆಗೆ ಹೆದರಿ ರಾಜ್ಯದಲ್ಲಿ ಎಸ್‌ಸಿ/ಎಸ್‌ಟಿ ಮೀಸಲು ಹೆಚ್ಚಳ ಮಾಡಲಾಗಿದೆ ಎಂದು ರಾಹುಲ್‌ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿ ‘ ಆ ಮನುಷ್ಯನಿಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಉತ್ತರ ಪ್ರದೇಶದಲ್ಲಿ ನಿನ್ನ ತಂಗಿ 2 ಸೀಟು ಗೆಲ್ಲಲು ಆಗಲಿಲ್ಲ. ಇಡೀ ದೇಶದಲ್ಲಿ ನಿಮ್ಮ ಅಡ್ರೆಸ್‌ ಇಲ್ಲ. ಕರ್ನಾಟಕ ಸೇರಿದಂತೆ ಎಲ್ಲೋ ಒಂದೆರಡು ಕಡೆ ಕಾಂಗ್ರೆಸ್ ಉಸಿರಾಡುತ್ತಿದೆ. ಇಲ್ಲಿಯೂ ಮುಂದೆ ಅಧಿಕಾರಕ್ಕೆ ಬರುವುದಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ಟಿಪ್ಪು ಎಕ್ಸ್‌ಪ್ರೆಸ್ ಹೆಸರು ಬದಲಾವಣೆಗೆ ಸಿದ್ದರಾಮಯ್ಯ ವಿರೋಧದ ಕುರಿತು ಮಾತನಾಡಿ ‘ ಸಿದ್ದರಾಮಯ್ಯಗೆ ಅಲ್ಪಸಂಖ್ಯಾತರನ್ನು ಓಲೈಸುವ ಚಟ. ಇಡೀ ದೇಶವೇ ಇದನ್ನು ಸ್ವಾಗತ ಮಾಡಿದೆ. ಹೆಸರು ಬದಲಾವಣೆ ಮಾಡಿರುವುದರ ಬಗ್ಗೆ ಯಾರಿಗೂ ಬೇಸರ ಇಲ್ಲ’ ಎಂದರು.


Spread the love