
ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ಅನರ್ಹತೆ ಪ್ರಜಾಪ್ರಭುತ್ವಕ್ಕೆ ಸಂದ ಗೌರವ: ಕುಯಿಲಾಡಿ ಸುರೇಶ್ ನಾಯಕ್
ಉಡುಪಿ: ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ಇದೆ ಎಂದು ಲಂಡನ್ ವಿಶ್ವವಿದ್ಯಾನಿಲಯದಲ್ಲಿ ಹೇಳಿಕೆ ನೀಡಿ ದೇಶದ ಮಾನ ಹರಾಜು ಹಾಕಿದ್ದ ಮಾಜಿ ಸಂಸದ ಹಾಗೂ ಕಾಂಗ್ರೆಸ್ಸಿನ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ‘ಎಲ್ಲಾ ಕಳ್ಳರ ಹೆಸರೆಲ್ಲಾ ಮೋದಿ ಎಂದೇ ಇರುತ್ತದೆ ಏಕೆ’ ಎಂದು ಕೋಲಾರದಲ್ಲಿ 2019ರಲ್ಲಿ ನೀಡಿದ್ದ ಹೇಳಿಕೆಗೆ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿಯವರಿಗೆ 2 ವರ್ಷಗಳ ಜೈಲುವಾಸ ಶಿಕ್ಷೆಯನ್ನು ವಿಧಿಸಿರುವುದು ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ‘ಜನಪ್ರತಿನಿಧಿಗಳ ಕಾಯ್ದೆ 1951’ರ ಪ್ರಕಾರ ರಾಹುಲ್ ಗಾಂಧಿಯವರ ಸಂಸತ್ ಸದಸ್ಯತನ ಅನರ್ಹತೆಗೊಂಡಿರುವುದು ಪ್ರಜಾಪ್ರಭುತ್ವಕ್ಕೆ ಸಂದ ಗೌರವ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಈ ಪ್ರಕ್ರಿಯೆ ಜನಪ್ರತಿನಿಧಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ನಿಟ್ಟಿನಲ್ಲಿ ಹೊಸ ಕ್ರಾಂತಿ ಮೂಡಿಸಿದೆ. ರಾಹುಲ್ ಗಾಂಧಿಯವರಿಗೆ 2 ವರ್ಷಗಳ ಜೈಲು ಶಿಕ್ಷೆ ಪ್ರಕಟವಾಗಿರುವುದು ‘ಪ್ರಧಾನಿ ನರೇಂದ್ರ ಮೋದಿ’ಯವರನ್ನು ಬೈದಿದ್ದಕ್ಕಾಗಿ ಅಲ್ಲ; ಬದಲಿಗೆ ಹಿಂದುಳಿದ ವರ್ಗಕ್ಕೆ ಸೇರಿದ ‘ಮೋದಿ ಎಂಬ ಉಪನಾಮ ಹೊಂದಿರುವ ಎಲ್ಲರನ್ನೂ ಬೈದು ಅವಮಾನಿಸಿದ್ದಕ್ಕಾಗಿ’ ಎಂಬುದು ಇಲ್ಲಿ ಗಮನಾರ್ಹ ಅಂಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ತನ್ನ ಅಧಿಕಾರಾವಧಿಯಲ್ಲಿ ನಿರಂತರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಾ ಬಂದಿದ್ದ ಕಾಂಗ್ರೆಸ್ ಕನಿಷ್ಠ ನ್ಯಾಯಾಲಯದ ಆದೇಶವನ್ನು ಗೌರವಿಸುವಂತಹ ಮಾನಸಿಕತೆಯನ್ನು ರೂಡಿಸಿಕೊಳ್ಳದಿರುವುದು ವಿಷಾದನೀಯ. 1975ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಚುನಾವಣಾ ಅಕ್ರಮಗಳ ವಿರುದ್ಧ ಅಲಹಾಬಾದ್ ನ್ಯಾಯಾಲಯ ತೀರ್ಪು ನೀಡಿದಾಗ ಅಧಿಕಾರ ದುರುಪಯೋಗಪಡಿಸಿಕೊಂಡು ದೇಶದಾದ್ಯಂತ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪ್ರಸ್ತುತ ನ್ಯಾಯಾಲಯದ ಆದೇಶವನ್ನು ಗೌರವಿಸಿ ಪಾಲನೆ ಮಾಡುವಂತಹ ಸೌಜನ್ಯತೆ ಹೊಂದುವುದು ಇಂದಿನ ಅಗತ್ಯತೆಯಾಗಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.