
ರಾಹುಲ್ ಭೇಟಿ ಬಿಜೆಪಿಗೆ ಲಾಭ: ನಳಿನ್ ವ್ಯಂಗ್ಯ
ಮಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲ, ಕರ್ನಾಟಕದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಬೇಕು. ಅವರು ಭೇಟಿ ನೀಡಿದ ಕಡೆಗಳಲ್ಲೆಲ್ಲ ಬಿಜೆಪಿಗೆ ಲಾಭವಾಗುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಟೀಕಿಸಿದರು.
ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕರ್ತರ ಜತೆಗಿನ ವಿಡಿಯೊ ಸಂವಾದ ಕಾರ್ಯಕ್ರಮದ ವೀಕ್ಷಣೆಯಲ್ಲಿ ಭಾಗಿಯಾದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಹುಲ್ ಗಾಂಧಿ ಜಿಲ್ಲೆಗೆ ಬಂದು ಭಾಷಣ ಮಾಡಿದರೆ ಬಿಜೆಪಿಗೆ ಯಾವ ತೊಂದರೆ ಇಲ್ಲ. ಹಾಗಾಗಿ, ಅವರು ಎಲ್ಲ ಕಡೆ ಭೇಟಿ ನೀಡಿ ಭಾಷಣ ಮಾಡುವುದು ಒಳಿತು ಎಂದರು.
ಬಿಜೆಪಿ ಎಂದಿಗೂ ಲಿಂಗಾಯತ, ವೀರಶೈವ ಎಂದು ವಿಭಜನೆ ಮಾಡಿಲ್ಲ ಆದರೆ, ಕಾಂಗ್ರೆಸ್ ಅವರಿಗೆ ಅವಮಾನ ಮಾಡಿದೆ ಮಾತ್ರವಲ್ಲ, ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಈ ಸಮುದಾಯದ ಭಾವನೆಗೆ ಧಕ್ಕೆಯಾಗಿದೆ. ಕೆಲ ದಿನಗಳ ಹಿಂದೆ ಕೂಡ ಸಿದ್ದರಾಮಯ್ಯ ಅವರು ಲಿಂಗಾಯತರ ವಿರುದ್ಧ ಮಾತನಾಡಿದ್ದಾರೆ. ಬಿಜೆಪಿ ಕಡಿಮೆ ಅವಧಿಯಲ್ಲಿ ರಾಜ್ಯದಲ್ಲಿ ಅಧಿಕಾರ ನಡೆಸಿದರೂ ಮೂವರು ಲಿಂಗಾಯತರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದೆ. ಅಲ್ಲದೆ ಮುಂದೆ ಲಿಂಗಾಯತರನ್ನೇ ಮುಖ್ಯಮಂತ್ರಿ ಮಾಡುವುದಾಗಿ ಹೇಳಿದೆ. ತಾಕತ್ತಿದ್ದರೆ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡುವುದಾಗಿ ಕಾಂಗ್ರೆಸ್ ಘೋಷಿಸಲಿ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ ಚುನಾವಣಾ ರಣಕಹಳೆ ಮೊಳಗಿದೆ. ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ಇದಕ್ಕಾಗಿ ಕಾರ್ಯಕರ್ತರು ಅಹೋರಾತ್ರಿ ಕೆಲಸ ಮಾಡುತ್ತಿದ್ದಾರೆ.ಪ್ರಧಾನಿ 15ಕ್ಕೂ ಅಧಿಕ ಬಾರಿ ರಾಜ್ಯ ಪ್ರವಾಸ ಮಾಡಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಲೆ ಎದ್ದಿದ್ದು, ಬಿಜೆಪಿ ಬಹುಮತ ಪಡೆದು ಸರ್ಕಾರ ರಚನೆ ಮಾಡಲಿದೆ ಎಂದರು.
ವರುಣದಲ್ಲಿ ಸಿದ್ದರಾಮಯ್ಯ ಸೋಲುತ್ತಾರೆ, ಕನಕಪುರದಲ್ಲಿ ಬಂಡೆ ಪುಡಿಯಾಗುತ್ತದೆ. ದಕ್ಷಿಣ ಕನ್ನಡದಲ್ಲಿ ಬಿಜೆಪಿ ಎಂಟು ಸ್ಥಾನಗಳನ್ನು ಗೆಲ್ಲಲಿದೆ ಎಂದು ನಳಿನ್ ವಿಶ್ವಾಸ ವ್ಯಕ್ತಪಡಿಸಿದರು.