ರೂ. 1.50 ಲಕ್ಷದತ್ತ ಚಿನ್ನದ ದರ ನಾಗಾಲೋಟ – ಬೆಳ್ಳಿ ದರದಲ್ಲೂ ದಾಖಲೆ ಜಿಗಿತ!
ನವದೆಹಲಿ: ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ಅನಿಶ್ಚಿತತೆಯ ನಡುವೆಯೇ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿವೆ. ಸೋಮವಾರ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1.50 ಲಕ್ಷ ರೂಪಾಯಿ ಗಡಿ ತಲುಪುವತ್ತ ದಾಪುಗಾಲು ಹಾಕಿದ್ದು, 1.38 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಇದೇ ವೇಳೆ ಬೆಳ್ಳಿ ಬೆಲೆ ಪ್ರತಿ ಕಿಲೋಗ್ರಾಂಗೆ 2.21 ಲಕ್ಷ ರೂಪಾಯಿಗೆ ಜಿಗಿದಿದೆ.
ದೆಹಲಿ ಮಾರುಕಟ್ಟೆಯಲ್ಲಿ ಸೋಮವಾರ 10 ಗ್ರಾಂ ಚಿನ್ನದ ದರ 1,685 ರೂಪಾಯಿ ಏರಿಕೆಯಾಗಿ 1,38,200 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆ ಪ್ರತಿ ಕಿಲೋಗ್ರಾಂಗೆ 10,400 ರೂಪಾಯಿ ಹೆಚ್ಚಾಗಿ 2,14,500 ರೂಪಾಯಿಯಾಗಿದೆ. ಇತ್ತ ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 1,27,720 ರೂಪಾಯಿಗೆ ಏರಿಕೆಯಾದರೆ, ಬೆಳ್ಳಿ ಬೆಲೆ ಪ್ರತಿ ಕಿಲೋಗ್ರಾಂಗೆ 2,21,800 ರೂಪಾಯಿಗೆ ತಲುಪಿದೆ.
ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿದರ ಇಳಿಕೆ, ವಿತ್ತೀಯ ಕೊರತೆ ನಿಯಂತ್ರಣದಲ್ಲಿ ಅಮೆರಿಕದ ಟ್ರಂಪ್ ಸರ್ಕಾರ ವಿಫಲವಾಗಿದೆ ಎಂಬ ಆತಂಕ, ಜಾಗತಿಕ ಆರ್ಥಿಕ ಅನಿಶ್ಚಿತತೆ-ಇವೆಲ್ಲ ಕಾರಣಗಳಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆ ಎನ್ನಲಾದ ಚಿನ್ನದತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ಚಿನ್ನದ ಬೆಲೆ ತೀವ್ರವಾಗಿ ಏರಿಕೆಯಾಗಿದೆ. ಮತ್ತೊಂದೆಡೆ ಹೂಡಿಕೆ ಹೆಚ್ಚಳ ಮತ್ತು ಕೈಗಾರಿಕಾ ಕ್ಷೇತ್ರಗಳಿಂದ ಭಾರೀ ಬೇಡಿಕೆ ಕಂಡುಬಂದಿರುವುದರಿಂದ ಬೆಳ್ಳಿ ಬೆಲೆಯಲ್ಲೂ ದಾಖಲೆ ಏರಿಕೆ ಕಂಡುಬಂದಿದೆ.
ಈ ವರ್ಷದ ಜನವರಿ 1ರಿಂದ ಇಂದಿನವರೆಗೆ ಪ್ರತಿ 10 ಗ್ರಾಂ ಚಿನ್ನದ ಬೆಲೆ ಸುಮಾರು 54,000 ರೂಪಾಯಿ (ಶೇ.65ರಷ್ಟು) ಏರಿಕೆಯಾಗಿದೆ. ಬೆಳ್ಳಿ ಬೆಲೆಯು ಇದೇ ಅವಧಿಯಲ್ಲಿ 1.26 ಲಕ್ಷ ರೂಪಾಯಿ (ಶೇ.126ರಷ್ಟು) ಹೆಚ್ಚಳ ದಾಖಲಿಸಿದೆ.
