ರೆಡ್ ಕ್ರಾಸ್ ಸಂಸ್ಥೆಯ ಸಮಾಜಮುಖಿ ಸೇವೆಗಳು ಶ್ಲಾಘನೀಯ: ಶಾಸಕ ಯಶ್ಪಾಲ್ ಸುವರ್ಣ

Spread the love

ರೆಡ್ ಕ್ರಾಸ್ ಸಂಸ್ಥೆಯ ಸಮಾಜಮುಖಿ ಸೇವೆಗಳು ಶ್ಲಾಘನೀಯ: ಶಾಸಕ ಯಶ್ಪಾಲ್ ಸುವರ್ಣ

ಉಡುಪಿ: ರೆಡ್ ಕ್ರಾಸ್ ಸಂಸ್ಥೆಯು ಮಾನವೀಯತೆಯ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯಾಗಿದ್ದು, ಯುದ್ಧ, ನೆರೆ ಮತ್ತು ಪ್ರಾಕೃತಿಕ ವಿಕೋಪಗಳಂತಹ ಸಂದರ್ಭದಲ್ಲಿ ಮಾಡುತ್ತಿರುವ ಸಮಾಜಮುಖಿ ಸೇವಾ ಚಟುವಟಿಕೆಗಳು ಹಾಗೂ ಪ್ರಥಮ ಚಿಕಿತ್ಸಾ ತರಬೇತಿ, ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಿ, ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.

ಅವರು ಇಂದು ನಗರದ ಅಜ್ಜರಕಾಡು ರೆಡ್ ಕ್ರಾಸ್ ಭವನದ ಹೆನ್ರಿ ಡ್ಯುನಾಂಟ್ ಹಾಲ್ನಲ್ಲಿ, ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕ ಮತ್ತು ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು, ಉಡುಪಿ ಇವರ ಸಹಯೋಗದಲ್ಲಿ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಘಟಕದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಕಳೆದ 22 ವರ್ಷಗಳಲ್ಲಿ ಮಾಡಿದ ಸೇವಾ ಕಾರ್ಯಗಳಿಗೆ 7 ಬಾರಿ ಅತ್ಯುತ್ತಮ ಜಿಲ್ಲಾ ಪ್ರಶಸ್ತಿಯನ್ನು ಪಡೆದಿದ್ದು, ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವ ರಕ್ತದಾನಿಗಳನ್ನು ಗೌರವಿಸಿ, ಸನ್ಮಾನಿಸಿ, ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಮಾತನಾಡಿ, ಪ್ರತಿ ವರ್ಷ ವಿಶ್ವದಾದ್ಯಂತ ಜೂನ್ 14 ರಂದು ಎ, ಬಿ, ಒ ರಕ್ತದ ಗುಂಪನ್ನು ಕಂಡುಹಿಡಿದ ಡಾ. ಕಾರ್ಲ್ ಲ್ಯಾಂಡ್ ಸ್ಟೇನಿಯರ್ರವರ ಹುಟ್ಟುಹಬ್ಬವನ್ನು ವಿಶ್ವ ರಕ್ತದಾನಿಗಳ ದಿನಾಚರಣೆಯನ್ನಾಗಿ ರೆಡ್ಕ್ರಾಸ್ ಸಂಸ್ಥೆಯಲ್ಲಿ ಆಚರಿಸಲಾಗುತ್ತಿದೆ. ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೇ ಇನ್ನೊಬ್ಬರಿಗೆ ಅಮೂಲ್ಯವಾದ ಜೀವವನ್ನು ನೀಡಬೇಕೆಂಬ ಉದ್ದೇಶದಿಂದ ಸ್ವಯಂ ಪ್ರೇರಿತರಾಗಿ ರಕ್ತದಾನವನ್ನು ಮಾಡುವ ರಕ್ತದಾನಿಗಳಿಗೆ ಗೌರವವನ್ನು ಈ ಕಾರ್ಯಕ್ರಮದ ಮೂಲಕ ಸಲ್ಲಿಸಲಾಗುವುದು ಎಂದರು.

ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ. ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಮನುಷ್ಯರ ದಾನದಿಂದ ಮಾತ್ರ ಇದನ್ನು ಪಡೆಯಬಹುದು. ರಕ್ತದಾನವು ಒಬ್ಬ ವ್ಯಕ್ತಿಯು ಮಾಡಬಹುದಾದ ಅತ್ಯಂತ ನಿಸ್ವಾರ್ಥ ಕಾರ್ಯಗಳಲ್ಲಿ ಒಂದಾಗಿದ್ದು, ಜೀವ ಉಳಿಸುವ ಶಕ್ತಿಯನ್ನು ಹೊಂದಿದೆ. ಮಹಾದಾನಗಳಲ್ಲಿ ರಕ್ತದಾನವು ಒಂದಾಗಿದ್ದು, ಇದರ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದರು.

ಜಿಲ್ಲೆಯಾದ್ಯಂತ ಕಾಲೇಜುಗಳಲ್ಲಿ ಯುವರೆಡ್ ಕ್ರಾಸ್ ಘಟಕವನ್ನು ಹೊಂದಿದ್ದು, ಕಾಲೇಜುಗಳಲ್ಲಿ ರಕ್ತದಾನದ ಬಗ್ಗೆ ಮಾಹಿತಿ ಹಾಗೂ ರಕ್ತದಾನ ಶಿಬಿರವನ್ನು ಏರ್ಪಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ರಕ್ತವನ್ನು ಸಂಗ್ರಹಿಸಿ ರೆಡ್ ಕ್ರಾಸ್ ರಕ್ತನಿಧಿ ಕೇಂದ್ರ ಕುಂದಾಪುರ ತಾಲೂಕು ಘಟಕಕ್ಕೆ ನೀಡುತ್ತಾ ಬಂದಿದ್ದು, ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆಯುತ್ತಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಜಿಲ್ಲಾ ಸರ್ಜನ್ ಹಾಗೂ ರಕ್ತನಿಧಿ ಕೇಂದ್ರದ ಸ್ಥಾಪಕ ವೈದ್ಯ ಡಾ. ಜಗದೀಶ್ ಶರ್ಮ, ರಕ್ತದಾನ, ರಕ್ತದಾನದ ಮಹತ್ವ ಹಾಗೂ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು

ಈ ಸಂದರ್ಭದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ವಿಶ್ವಾಸ್ ವಿ ತೆಂಕಿಲಾಯ, ಅಶೋಕ್ ನಾಯಕ್, ಕಲಾವತಿ ನಾಯಕ್, ಪಾಂಡುರಂಗ ಅಳ್ವಗದ್ದೆ, ಉದಯ ನಾಯಕ್ ಹಾಗೂ ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಲಾಯಿತು ಹಾಗೂ ನೆರೆ ಸಂತ್ರಸ್ತ ಫಲಾನುಭವಿಗಳಿಗೆ ಟರ್ಪಲಿನ್ಗಳನ್ನು ವಿತರಿಸಲಾಯತು.

ರೆಡ್ ಕ್ರಾಸ್ ಗೌರವ ಖಚಾಂಚಿ ರಮಾದೇವಿ, ರೆಡ್ ಕ್ರಾಸ್ ಕರ್ನಾಟಕ ರಾಜ್ಯ ಶಾಖೆಯ ಆಡಳಿತ ಮಂಡಳಿ ಸದಸ್ಯ ವಿ.ಜಿ. ಶೆಟ್ಟಿ, ರೆಡ್ ಕ್ರಾಸ್ ಆಡಳಿತ ಮಂಡಳಿ ಸದಸ್ಯ ಟಿ. ಚಂದ್ರಶೇಖರ್, ಮಾಜಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕೆ, ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ರೆಡ್ ಕ್ರಾಸ್ ಸದಸ್ಯ ಮತ್ತು ರಕ್ತದಾನಿಯಾದ ರಾಘವೇಂದ್ರ ಪ್ರಭು ಕರ್ವಾಲ್ ನಿರೂಪಿಸಿ, ರೆಡ್ಕ್ರಾಸ್ ಗೌರವ ಖಚಾಂಚಿ ರಮಾದೇವಿ ವಂದಿಸಿದರು.


Spread the love