ರೈತನ ಮೇಲೆ ದಾಳಿ ಮಾಡಿದ್ದ ಸಲಗ ಸೆರೆ

Spread the love

ರೈತನ ಮೇಲೆ ದಾಳಿ ಮಾಡಿದ್ದ ಸಲಗ ಸೆರೆ

ಗುಂಡ್ಲುಪೇಟೆ: ತಾಲೂಕಿನ ಬೆಟ್ಟದಮಾದಹಳ್ಳಿ ರೈತನ ಮೇಲೆ ದಾಳಿ ಮಾಡಿದ್ದ ಒಂಟಿ ಸಲಗವನ್ನು ಹಂಚೀಪುರ ಗ್ರಾಮದ ಬಳಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಈ ಸಲಗವು ಸೋಮವಾರ ಬೆಳಗ್ಗೆ ಬೆಟ್ಟದಮಾದಳ್ಳಿ ರೈತ ದೇವರಾಜಪ್ಪ ಎಂಬುವವರ ಮೇಲೆ ದಾಳಿ ನಡೆಸಿ ತೀವ್ರ ಗಾಯಗೊಳಿಸಿತ್ತು. ಅಲ್ಲದೆ ಜಮೀನಿಗೆ ನುಗ್ಗಿ ರೈತರ ಬಾಳೆ ಫಸಲು, ಹುರುಳಿ ತಿಂದು ತುಳಿದು ನಾಶ ಮಾಡಿ ತಂತಿ ಬೇಲಿ ಸೇರಿದಂತೆ ಇತರೆ ಬೆಳೆಗಳನ್ನು ನಾಶಪಡಿಸಿತ್ತು. ಈ ಒಂಟಿ ಸಲಗನನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದರು.

ಆದರೆ ವಲಯ ಅರಣ್ಯಾಧಿಕಾರಿ ನವೀನ್‍ಕುಮಾರ್ ಹಾಗೂ ಸಿಬ್ಬಂದಿ ಸಲಗನ ಸೆರೆಗೆ ಹರ ಸಾಹಸ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆ ನಂತರ ಸೋಮವಾರ ರಾತ್ರಿ ಓಂಕಾರ ಅರಣ್ಯದತ್ತ ಸಲಗ ತೆರಳಿತ್ತು. ಅಲ್ಲದೆ ಮಂಗಳವಾರ ಬೆಳಗ್ಗೆ ಓಂಕಾರ ವಲಯಕ್ಕೆ ಹೊಂದಿ ಕೊಂಡಂತಿರುವ ಹಂಚೀಪುರ ಬಳಿ ಕಾಣಿಸಿಕೊಂಡಿತು.

ಮಂಗಳವಾರ ಬೆಳಗ್ಗೆ ಅಭಿಮನ್ಯು, ಮಹೇಂದ್ರ, ಭೀಮ, ಗಣೇಶ್ ಸಾಕಾನೆಗಳನ್ನು ಹಂಚೀಪುರಕ್ಕೆ ಕರೆ ತಂದು ಕಾರ್ಯಾಚರಣೆ ಆರಂಭಿಸಿಲಾಗಿತ್ತು. ಕಾರ್ಯಾಚರಣೆಯಲ್ಲಿ ಪಶು ವೈದ್ಯರಾದ ಡಾ.ಮುಜೀಬ್, ಡಾ.ವಾಸೀಂ, ಡಾ.ರಮೇಶ್ ಹಾಗು ಶೂಟರ್ ಸಹಾಯಕ ಅಕ್ರಂ ಮತ್ತು ಅರಣ್ಯ ಸಿಬ್ಬಂದಿ ತೊಡಗಿಸಿಕೊಂಡಿದ್ದರು. ಮಧ್ಯಾಹ್ನ ಸಲಗನ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿ ಸಲಗ ಪತ್ತೆಯಾದ ಕೂಡಲೇ ಅರವಳಿಕೆ ಮದ್ದಿನಿಂದ ಶೂಟ್ ಮಾಡಲಾಯಿತು. ಈ ವೇಳೆ ನಾಲ್ಕು ಸಾಕಾನೆಗಳು ಅದರ ಸುತ್ತುವರಿದವು. ಅದನ್ನು ಸೆರೆಹಿಡಿದ ಬಳಿಕ ಕ್ರೈನ್ ಮೂಲಕ ಲಾರಿಗೆ ಹತ್ತಿಸಿ ಕಲ್ಕರೆ ವಲಯದ ಬಳಿಯ ರಾಂಪುರ ಆನೆ ಶಿಬಿರಕ್ಕೆ ಬಿಡಲಾಗಿದೆ.


Spread the love

Leave a Reply

Please enter your comment!
Please enter your name here