ರೈತರಿಗೆ ನೀಡುತ್ತಿರುವ ಸವಲತ್ತುಗಳು ನೈಜ ಫಲಾನುಭವಿಗಳಿಗೆ ತಲುಪುತ್ತಿಲ್ಲ – ಕೆ. ಪ್ರತಾಪಚಂದ್ರ ಶೆಟ್ಟಿ

Spread the love

ರೈತರಿಗೆ ನೀಡುತ್ತಿರುವ ಸವಲತ್ತುಗಳು ನೈಜ ಫಲಾನುಭವಿಗಳಿಗೆ ತಲುಪುತ್ತಿಲ್ಲ – ಕೆ. ಪ್ರತಾಪಚಂದ್ರ ಶೆಟ್ಟಿ

ಕುಂದಾಪುರ: ಸರ್ಕಾರದಿಂದ ರೈತರಿಗೆ ನೀಡುತ್ತಿರುವ ಸವಲತ್ತುಗಳು ಹಾಗೂ ಸೌಲಭ್ಯಗಳು ಸರಿಯಾದ ರೀತಿಯಲ್ಲಿ ಫಲಾನುಭವಿಗಳನ್ನು ಸಿಗುತ್ತಿಲ್ಲ. ಸರ್ಕಾರದ ಅನೇಕ ಯೋಜನೆ ಹಾಗೂ ಕಾರ್ಯಕ್ರಮಗಳಲ್ಲಿ ರೈತಾಪಿ ವರ್ಗದ ನಿರಂತರ ಕಡೆಗಣನೆಯಾಗುತ್ತಿದ್ದರೂ, ಅದು ಆಳುವವರ ಕಿವಿಯನ್ನು ತಲುಪುತ್ತಿಲ್ಲ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ.ಪ್ರತಾಪಚಂದ್ರ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.

ಅವರು ನಗರದ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೈತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರದ ಮುಂದೆ ಹೇಳಿಕೊಳ್ಳಬೇಕು ಎಂದರೆ ಅದಕ್ಕೆ ಸರಿಯಾದ ವೇದಿಕೆಗಳು ದೊರಕುತ್ತಿಲ್ಲ. ಈ ಕಾರಣಕ್ಕಾಗಿ ರೈತರು ಹಾಗೂ ಸರ್ಕಾರದ ನಡುವಿನ ಸಂವಹನಕ್ಕಾಗಿ ಡಿ.23 ರ ರಾಷ್ಟ್ರೀಯ ರೈತ ದಿನಾಚರಣೆಯನ್ನು ಸರ್ಕಾರದ ವತಿಯಿಂದಲೇ ಆಚರಿಸಿದರೆ ಅದು ಹೆಚ್ಚು ಅರ್ಥಪೂರ್ಣವಾಗುತ್ತದೆ. ಸರ್ಕಾರದ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟುವುದು ಇದೀಗ ವಿಳಂಬವಾಗುತ್ತಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತೋಟಗಾರಿಕೆ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಮೊಳಹಳ್ಳಿ ಜಯಶೀಲ ಶೆಟ್ಟಿ ಅವರು, ರೈತ ಸಂಘಟನೆಗಳಿಗೆ ರೈತರ ಸಮಸ್ಯೆಗಳ ಅರಿವಿರಬೇಕು. ರೈತ ಸಂಘಟನೆಗಳು ರಾಜಕೀಯ ದೃಷ್ಟಿಕೋನವನ್ನು ಬಿಟ್ಟು ಮುನ್ನೆಡೆದಾಗ ಸಂಘಟನೆಯ ಉದ್ದೇಶಗಳು ನಿರೀಕ್ಷಿತ ಗುರಿ ಮುಟ್ಟುತ್ತದೆ. ಪ್ರಾಮಾಣಿಕತೆಯೊಂದಿಗೆ, ಬದ್ಧತೆ ಹಾಗೂ ಸ್ವಷ್ಟ ನಿಲುವನ್ನು ಹೊಂದಿರುವ ರೈತ ನಾಯಕ ಕೆ.ಪ್ರತಾಪಚಂದ್ರ ಶೆಟ್ಟರ ನಾಯಕತ್ವದಲ್ಲಿ ಉಡುಪಿ ಜಿಲ್ಲಾ ರೈತ ಸಂಘ ಸಮರ್ಥವಾಗಿ ಮುನ್ನೆಡೆಯುತ್ತಿರುವುದು ಅಭಿನಂದನೀಯ ಎಂದರು.

ಭಾರತೀಯ ಕಿಸಾನ್ ಸಂಘದ ಕುಂದಾಪುರ ತಾಲ್ಲೂಕು ಅಧ್ಯಕ್ಷ ಸೀತಾರಾಮ ಗಾಣಿಗ, ಉಡುಪಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಂ.ಮಹೇಶ ಹೆಗ್ಡೆ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸಂಜೀವ ಶೆಟ್ಟಿ ಸಂಪಿಗೇಡಿ,ಕೆದೂರು ಸದಾನಂದ ಶೆಟ್ಟಿ, ರೈತ ಹಾಗೂ ಸಹಕಾರಿ ಸಂಘಟನೆಗಳ ಪ್ರಮುಖರಾದ ಚೋರಾಡಿ ಕೃಷ್ಣರಾಜ್ ಶೆಟ್ಟಿ, ಶರತ್‌ಕುಮಾರ ಶೆಟ್ಟಿ ಬಾಳಿಕೆರೆ, ರೋಹಿತ್‌ಕುಮಾರ ಶೆಟ್ಟಿ ಬ್ರಹ್ಮಾವರ, ಜಯರಾಮ ಶೆಟ್ಟಿ ಸುರ್ಗೊಳಿ, ದೀನಪಾಲ ಶೆಟ್ಟಿ, ಸಚ್ಚಿಂದಾನಂದ ವೈದ್ಯ, ಶರಶ್ಚಂದ್ರ ಶೆಟ್ಟಿ ಕಾವ್ರಾಡಿ, ಕೃಷ್ಣದೇವ ಕಾರಂತ್ ಕೋಣಿ, ಕೆ.ಸದಾಶಿವ ಶೆಟ್ಟಿ ಶಂಕರನಾರಾಯಣ, ವಸಂತ ಹೆಗ್ಡೆ ಬೈಂದೂರು, ಕಿರಣ್ ತೋಳಾರ್ ಹೆಬ್ರಿ, ಚಂದ್ರಶೇಖರ ಶೆಟ್ಟಿ ಮರತ್ತೂರು, ಸುಧಾಕರ ಶೆಟ್ಟಿ ಪೆರ್ಡೂರು ಇದ್ದರು.

ಉತ್ತರ ಆಪ್ರಿಕಾದ ಮೊರೊಕೊದಲ್ಲಿ ನಡೆದ ಎಸ್.ಬಿ.ಸಿ.ಸಿ ಅಂತರಾಷ್ಟ್ರೀಯ ಶೃಂಗಸಭೆಯಲ್ಲಿ ಕರ್ನಾಟಕವನ್ನು ಪಂಚಾಯತ್ ರಾಜ್ ವಿಭಾಗವನ್ನು ಪ್ರತಿನಿಧಿಸಿದ ಏಕೈಕ ಚುನಾಯಿತ ಪ್ರತಿನಿಧಿ ವಂಡ್ಸೆ ವಲಯ ರೈತ ಸಂಘದ ಅಧ್ಯಕ್ಷ ಉದಯಕುಮಾರ ಶೆಟ್ಟಿ, ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ ಡಾ.ಅತುಲ್ ಕುಮಾರ್ ಶೆಟ್ಟಿ ಚಿತ್ತೂರು, ಸಹಕಾರಿ ಸಾಧಕ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಕಂಬದಕೋಣೆ, ಸಮಗ್ರ ಕೃಷಿ ಸಾಧಕರಾದ ಚಿತ್ತರಂಜನ್ ರಾವ್, ಚಂದ್ರಶೇಖರ ಉಡುಪ ಮಸ್ವಾಡಿ, ಪ್ರಗತಿಪರ ಕೃಷಿಕರಾದ ಬಸವ ರಾಜ್ ಪೂಜಾರಿ ಕೊರವಡಿ, ಜಯಕರ ಶೆಟ್ಟಿ, ಬಿ.ರತ್ನಾಕರ ಶೆಟ್ಟಿ ಸಿದ್ಧಾಪುರ, ಸುಕೇಶ ಶೆಟ್ಟಿ ಬೈಂದೂರು, ವೆಂಕಟ ಪೂಜಾರಿ ತ್ರಾಸಿ, ಮಲ್ಲಿಗೆ ಕೃಷಿ ಸಾಧಕಿ ಲಲಿತಾ ಶೆಟ್ಟಿ ಕೋಟೇಶ್ವರ, ಸಮಾಜ ಸೇವೆಯಲ್ಲಿ ಪ್ರಸಾದ್ ಹೆಗ್ಡೆ ಹೆಬ್ರಿ, ಹೈನುಗಾರರಾದ ಸತೀಶ ಶೆಟ್ಟಿ ಪೆರ್ಡೂರು ಇವರುಗಳನ್ನು ಸನ್ಮಾನಿಸಿಲಾಯಿತು. ರೈತ ಸಂಘದ 2023ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬೆಳ್ವೆ ಸತೀಶ್ ಕಿಣಿ ಸ್ವಾಗತಿಸಿದರು, ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ ವಿಕಾಸ್ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು, ಅಶೋಕ್ ಶೆಟ್ಟಿ ಚೋರಾಡಿ ವಂದಿಸಿದರು.


Spread the love