
ರೈತರಿಗೆ ಶಾಸನಬದ್ಧ ಕುಮ್ಕಿ ಹಕ್ಕು ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿಗೆ ರೈತ ಸಂಘದಿಂದ ಪತ್ರ
ಕುಂದಾಪುರ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಮ್ಮಿ, ಠಾಣೆ ಬಾಣೆ ಜಮ್ಮ, ಸೊಪ್ಪಿನ ಬೆಟ್ಟದಂತಹ ಜಮೀನಿನಲ್ಲಿ ಕೃಷಿಗೆ ಪೂರಕವಾಗಿ ಶಾಸನಬದ್ಧವಾದ ಹಕ್ಕನ್ನು ರೈತರಿಗೆ ನೀಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ರೈತ ಸಂಘದಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಲಾಗಿದೆ.
ಭಾಷಾವಾರು ಪ್ರಾಂತ್ಯಾ ವಿಂಗಡಣೆಯಾಗುವ ಮುನ್ನ ಮದ್ರಾಸ್ ಪ್ರಾಂತ್ಯದ ಆಡಳಿತಕ್ಕೆ ಒಳಪಟ್ಟಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂದಾಯ ಅಳತೆಯ 1896 ರ ಬಿ 50 ( ಬೋರ್ಡ್ ಆಫ್ ಸ್ಕ್ಯಾನಿಂಗ್ ಆರ್ಡರ್ ) 15(40) ರ ನಿಯಮಗಳ ಮೇರೆಗೆ ಖದೀಂ ವರ್ಗದ ಜಮೀನಿನಲ್ಲಿ ಕೃಷಿ ಮಾಡುವ ರೈತರಿಗೆ ಅದರ ಸುತ್ತಲು ಲಭ್ಯವಿರಬಹುದಾದ 450 ಲಿಂಕ್ಸ್ , 100 ಗಜ (90ಮೀಟರ್) ವ್ಯಾಪ್ತಿಯ ಅಧೀನ ಸರ್ಕಾರಿ ಜಮೀನನ್ನು ಕುಮ್ಮಿ ಸವಲತ್ತಿನ ಜಮೀನೆಂದು ಪರಿಗಣಿಸಲಾಗಿತ್ತು. ಈ ಬಗ್ಗೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ 79 (2) ರಡಿ ವಿಶಿಷ್ಟ ಹಕ್ಕುಗಳುಳ್ಳ ಜಮೀನುಗಳಲ್ಲಿ ಕೃಷಿ ಉದ್ದೇಶಕ್ಕಾಗಿ, ಜಾನುವಾರುಗಳ ಮೇವಿಗಾಗಿ, ಸೊಪ್ಪು, ತರಗಲೆ, ಉರುವಲು ಕಟ್ಟಿಗೆಗಳನ್ನು ರೈತರು ಅನುಭವಿಸಲು ಅವಕಾಶವಿದೆ ಎನ್ನುವ ಉಲ್ಲೇಖ ಇದೆ. ಆದರೆ ಆದರ ಸಂಪೂರ್ಣ ಹಕ್ಕುಗಳು ಇರುವುದಿಲ್ಲ. ಕುಮ್ಮಿ ಭೂಮಿ ಪರಭಾರೆ ಮತ್ತು ಪರಿವರ್ತನ ಮಾಡಲು ಅವಕಾಶವಿಲ್ಲ.
ಸರ್ಕಾರ ಗೋಮಾಳ ಗಾಯರಾಣ, ಹುಲ್ಲು ಬನ್ನಿ, ಸೊಪ್ಪಿನ ಬೆಟ್ಟ ಇತ್ಯಾದಿ ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನುಗಳನ್ನು ಖಾಸಗಿ ಸಂಘ
ಸಂಸ್ಥೆಗಳಿಗೆ ಮಂಜೂರು ಮಾಡುವ ಕುರಿತು ಒಂದು ನೀತಿಯನ್ನು ರೂಪಿಸಲು ಸಚಿವ ಸಂಪುಟದ ಒಂದು ಉಪ ಸಮಿತಿಯನ್ನ ರಚಿಸಿದ್ದು, ಸರ್ಕಾರದ ಈ ನಿಲುವು ರೈತ ವಿರೋಧಿಯಾಗಿದ್ದು ರೈತರ ಮೂಲಭೂತ ಅವಶ್ಯಕತೆಗಳನ್ನು ಪಡೆಯಲು ಹಿಂದಿನ ಸರ್ಕಾರಗಳು ಮಾಡಿದ ತೀರ್ಮಾನಗಳಿಗೆ ವ್ಯತಿರಿಕ್ತವಾಗಿರುತ್ತದೆ.
ಖದೀಂ ವರ್ಗದ ಭೂಮಿಯೊಂದಿಗೆ ಕುಮ್ಮಿ ಭೂಮಿ ಸೇರಬೇಕೇ ಹೊರತು, ಖದೀಂ ವರ್ಗದ ಭೂಮಿ ಹೊಂದಿದ ಭೂ ಮಾಲಿಕನ ಹೆಸರಿಗಲ್ಲ ಇದನ್ನು ಸರ್ಕಾರ ಅರ್ಥೈಸಿಕೊಂಡು ಕೃಷಿಗೆ ಪೂರಕವಾಗಿ ಖದೀಂ ವರ್ಗದ ಜಮೀನಿಗೆ ಕುಮ್ಮಿ ಸವಲತ್ತಿನ ಜಮೀನು ಎಂದು ಪರಿಗಣಿಸಿ, ಪರಿವರ್ತನೆ ಮತ್ತು ಮಾರಾಟಕ್ಕೆ ಅವಕಾಶವಿಲ್ಲದಂತೆ ಕಾಡು ಬೆಳಸಲು ಪೂರಕವಾದ ಶಾಸನಬದ್ಧವಾದ ಅಧಿಕಾರವನ್ನು ನೀಡುವಂತೆ ಪತ್ರದಲ್ಲಿ ಸರ್ಕಾರವನ್ನು ಒತ್ತಾಯಿಸಲಾಗಿದೆ.