ರೈತರು ಒಂದೇ ಪದ್ಧತಿ ಅವಲಂಬಿಸಬೇಡಿ

Spread the love

ರೈತರು ಒಂದೇ ಪದ್ಧತಿ ಅವಲಂಬಿಸಬೇಡಿ

ಮೈಸೂರು: ರೈತರು ಕೇವಲ ಒಂದೇ ಪದ್ಧತಿಯನ್ನು ಅವಲಂಬಿಸದೇ ಕೃಷಿಯಲ್ಲಿರುವಂತಹ ನಾನಾ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಆರ್ಥಿಕ ಆದಾಯವನ್ನು ವೃದ್ಧಿಗೊಳಿಸಿಕೊಳ್ಳಲು ಇರುವಂತಹ ಅಗತ್ಯತೆ ಬಗ್ಗೆ ನಗರದ ಜೆ.ಕೆ.ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕೃಷಿ ವಸ್ತು ಪ್ರದರ್ಶನವನ್ನು ಶುಕ್ರವಾರ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿದರು.

ಸಚಿವರು ಮಾತನಾಡಿ ಅ.2 ರವರೆಗೆ ರೈತ ದಸರಾ ಪ್ರಯುಕ್ತ ಕೃಷಿ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಸರ್ಕಾರದ ವಿವಿಧ ಇಲಾಖೆಗಳಾದ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ ಹಾಗೂ ರೇಷ್ಮೆ ಇಲಾಖೆಯಿಂದ ರೈತರ ಆರ್ಥಿಕ ಅಭಿವೃದ್ಧಿಗೆ ಅಗತ್ಯವಿರುವ ಸೌಲಭ್ಯಗಳು ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ವಸ್ತು ಪ್ರದರ್ಶನದಲ್ಲಿ ಸುಮಾರು 40 ಕ್ಕೂ ಹೆಚ್ಚಿನ ಮಳಿಗೆಗಳಿದ್ದು, ನೀರಿನ ಮೌಲ್ಯದ ಬಗ್ಗೆ, ಮಣ್ಣಿನ ಸಂರಕ್ಷಣೆ ಬಗ್ಗೆ, ಎಂ.ಜಿ.ಎನ್.ಆರ್.ಇ.ಜಿ.ಎ ಯಿಂದ ದೊರೆಯುವಂತಹ ತೋಟಗಾರಿಕೆ ಸೌಲಭ್ಯಗಳು, ಕೃಷಿ ಇಲಾಖೆಯಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ರೈತಶಕ್ತಿ ಯೋಜನೆ, ಬೆಳೆ ವಿಮಾ ಯೋಜನೆ, ಮೀನುಗಾರಿಕೆ ಇಲಾಖೆಯಿಂದ ಮೀನಿನ ಸಾಕಾಣಿಕೆ ಬಗ್ಗೆ ಹಾಗೂ ದೊರೆಯುವ ಯೋಜನೆಗಳು, ರೇಷ್ಮೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳು, ಸಾಮಾಜಿಕ ಅರಣ್ಯ ಇಲಾಖೆಯಡಿ ವೈಯಕ್ತಿಕವಾಗಿ ರೈತನಿಗೆ ದೊರೆಯುವ ಪ್ರೋತ್ಸಾಹ ಧನದ ಬಗ್ಗೆ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಡಿ ಪಶುಪಲಾನಾ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ, ಪುಣ್ಯಕೋಟಿ ದತ್ತು ಯೋಜನೆ, ಕೃಷಿ ವಿಶ್ವವಿದ್ಯಾನಿಲಯ, ಕೃಷಿ ವಿಜ್ಙಾನ ಕೇಂದ್ರ, ಕೃಷಿ ಪರಿಕರ ಖಾಸಗಿ ಸಂಸ್ಥೆಗಳು, ಆಧುನಿಕ ತಂತ್ರಜ್ಞಾನಗಳ ಪರಿಕರಗಳ ಪ್ರದರ್ಶನವನ್ನು ಇಲ್ಲಿ ಕಾಣಬಹುದಾಗಿದೆ.

ಈ ವೇಳೆ ಸಚಿವರಾದ ಬಿ.ಸಿ.ಪಾಟೀಲ್, ಅಶ್ವಥ್ ನಾರಾಯಣ್, ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಮೇಯರ್ ಶಿವಕುಮಾರ್, ಉಪ ಕೃಷಿ ನಿರ್ದೇಶಕರಾದ ಕೆ.ರಾಜು, ಉಪ ವಿಶೇಷಾಧಿಕಾರಿ ಎಂ.ಕೃಷ್ಣರಾಜು ಸೇರಿದಂತೆ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.


Spread the love