ರೈತರ ಮೂಗಿಗೆ ತುಪ್ಪ ಸವರಿದ ಸರ್ಕಾರ: ಕೋಡಿಹಳ್ಳಿ ಚಂದ್ರಶೇಖರ್

Spread the love

ರೈತರ ಮೂಗಿಗೆ ತುಪ್ಪ ಸವರಿದ ಸರ್ಕಾರ: ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು: ಒಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ, ಮತ್ತೊಂದೆಡೆ ಅತ್ಯಲ್ಪ ಬೆಂಬಲ ಬೆಲೆ ನೀಡಿ ಸರ್ಕಾರ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಕೊರೊನಾ ಲಾಕ್‌ಡೌನ್ ಕಾಲದಲ್ಲಿ ಜನರಿಗೆ ಸರಿಯಾಗಿ ಉದ್ಯೋಗ, ದುಡಿಮೆ ಇಲ್ಲದೇ ಊಟಕ್ಕೂ ಪರದಾಡುವ ಇಂತಹ ಸಮಯದಲ್ಲಿ ರಾಜ್ಯ ಸರ್ಕಾರ ವಿದ್ಯುತ್ ಬಿಲ್ ಪ್ರತಿ ಯೂನಿಟ್‌ಗೆ 30 ಪೈಸೆ ದರ ಹೆಚ್ಚಿಸಿರುವುದು ಸರಿಯಲ್ಲ ಎಂದಿರುವ ಅವರು ದರ ಏರಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಲಾಕ್‌ಡೌನ್ ನಿಂದ ಚೇತರಿಸಿಕೊಳ್ಳಲು ಬಿಡದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯುತ್ ದರ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಆಸ್ತಿ ತೆರಿಗೆ ಹೆಚ್ಚಿಸಿದ್ದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಹ ಸ್ಥಿತಿ ಎದುರಾಗಿದೆ. ವಿದ್ಯುತ್ ಸರಬರಾಜು ಕಂಪನಿಗಳು ನಷ್ಟದಲ್ಲಿವೆ ಎಂದು ಹೇಳುವ ಸರ್ಕಾರ ಕೇಂದ್ರದಿಂದ ವಿದ್ಯುತ್ ಖರೀದಿ, ಆದಾನಿ ಕಂಪನಿಯಿಂದ ವಿದ್ಯುತ್ ಖರೀದಿಯನ್ನು ನಿಲ್ಲಿಸಿಲ್ಲ. ಮೊದಲು ದುಬಾರಿ ಬೆಲೆಗೆ ಖರೀದಿ ನಿಲ್ಲಿಸಿ ವಿದ್ಯುತ್ ದರ ಪರಿಷ್ಕರಣೆ ಮಾಡಲಿ ಎಂದು ಅವರು ಆಗ್ರಹಿಸಿದ್ದಾರೆ.

ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಟ್ರಾಕ್ಟರ್ ಉಳುಮೆ ವೆಚ್ಚ ಹೆಚ್ಚಾಗಿದೆ. ರೈತರು ಎಷ್ಟು ಡೀಸೆಲ್ ಬಳಸುವರು, ಬೆಲೆ ಏರಿಕೆಯಿಂದಾಗಿ ಆದ ಹೆಚ್ಚುವರಿ ಹೊರೆ ಎಷ್ಟು ಎಂಬುದನ್ನು ಪರಿಗಣಿಸಿ ಬೆಂಬಲ ಬೆಲೆ ಹೆಚ್ಚಳ ಮಾಡಿಲ್ಲ. ವಿದ್ಯುತ್ ದರ ಏರಿಕೆ ಒಂದೆಡೆಯಾದರೆ, ಮತ್ತೊಂದೆಡೆ ನಾಮಕಾವಸ್ಥೆ ಬೆಂಬಲ ಬೆಲೆ ಹೆಚ್ಚಳ ಮಾಡಿ ಮಹದುಪಕಾರ ಮಾಡಿದಂತೆ ಬಿಂಬಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಬಲ ಬೆಲೆ ರಕ್ಷಣೆಗೆ ಕಾನೂನಿನ ಅಗತ್ಯವಿದೆ, ಇಲ್ಲವಾದಲ್ಲಿ ಈ ಬೆಂಬಲ ಬೆಲೆ ಅವೈಜ್ಞಾನಿಕವಾಗಿ ನಿಗದಿಯಾಗುತ್ತಲೇ ಸಾಗಲಿದೆ. ಇದರ ರಕ್ಷಣೆಗಾಗಿ ಪಂಜಾಬ್ ರಾಜ್ಯದಲ್ಲಿ ಎಂಎಸ್‌ಪಿ ದರಕ್ಕಿಂತ ಕಡಿಮೆ ದರಕ್ಕೆ ಖರೀದಿ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ ಎಂಬ ಕಾನೂನಿದ್ದು, ಇಂತಹ ನಿಯಮ ದೇಶವ್ಯಾಪಿಯಾಗಿರಬೇಕು ಎಂದು ಒತ್ತಾಯಿಸಿದ್ದಾರೆ.


Spread the love