ರೈತರ ಹೆಸರಿನ ವಂಚನೆ ನಿಲ್ಲಿಸಲು ರೈತ ಸಂಘ ಆಗ್ರಹ: ವರಾಹಿ ಯೋಜನೆಗೆ ಮುಕ್ತಿ ಎಂದು?

Spread the love

ರೈತರ ಹೆಸರಿನ ವಂಚನೆ ನಿಲ್ಲಿಸಲು ರೈತ ಸಂಘ ಆಗ್ರಹ: ವರಾಹಿ ಯೋಜನೆಗೆ ಮುಕ್ತಿ ಎಂದು?

ಕುಂದಾಪುರ: ಉಡುಪಿ ಜಿಲ್ಲೆಯ ಬಹುದೊಡ್ಡ ನೀರಾವರಿ ಯೋಜನೆಯಾದ ವರಾಹಿ ಯೋಜನೆಗೆ ಈಗಾಗಲೇ 41 ವರ್ಷ ತುಂಬಿದ್ದರೂ, ಬೇರೆ ಬೇರೆ ಹಿತಾಸಕ್ತಿಗಳಿಂದಾಗಿ ಯೋಜನೆಯ ಪೂರ್ಣ ಅನುಷ್ಠಾನದಲ್ಲಿ ವಿಳಂಭವಾಗುತ್ತಿದೆ. ವರಾಹಿ ಎಡದಂಡೆ ಯೋಜನೆ ಪೂರ್ಣಗೊಳ್ಳಲು ಅವಕಾಶವಾಗದಂತೆ ಹಲವು ವಿಘ್ನಗಳನ್ನು ತರಲಾಗಿದೆ. ರೈತರ ಬಹು ವರ್ಷದ ಬೇಡಿಕೆಯಾದ ಬಲದಂಡೆ ಯೋಜನೆಯ ಡಿ.ಪಿ.ಆರ್ ಅನುಮೋದನೆಗೂ ಮೀನ ಮೇಷ ಎಣಿಸುತ್ತಿರುವುದು ಅನುಮಾನಗಳನ್ನು ಹೆಚ್ಚಿಸುತ್ತಿದೆ ಎಂದು ರೈತ ಸಂಘ ದೂರಿದೆ.

 

ರೈತರಿಗೆ ಉಪಯೋಗಕ್ಕಾಗಿ ಅನುಷ್ಠಾನಕ್ಕೆ ಬಂದ ವರಾಹಿ ಯೋಜನೆಯಲ್ಲಿನ ಕಾಲುವೆಗಳಲ್ಲಿ ನೀರು ಹರಿದರೆ ಖಾಸಗಿ ವಿದ್ಯುತ್ ಕಂಪೆನಿಯ ವಿದ್ಯುತ್ ಉತ್ಪಾದನೆಗೆ ನೀರು ಸಾಕಾಗುವುದಿಲ್ಲ. ವಿದ್ಯುತ್‌ ಉತ್ಪಾದನೆಗಾಗಿ ಹೊಳೆಗೆ ನೀರು ಹಾಯಿಸಿದರೆ ನೀರಾವರಿ ಕಾಲುವೆಗಳಲ್ಲಿ ನೀರು ಹರಿಯುವುದಿಲ್ಲ ಎನ್ನುವ ಪ್ರಬಲ ಆಕ್ಷೇಪಗಳನ್ನು ವ್ಯಕ್ತಪಡಿಸಿರುವ ಉಡುಪಿ ಜಿಲ್ಲಾ ರೈತ ಸಂಘ, ವರಾಹಿ ಯೋಜನೆಯಲ್ಲಿನ ಅಡೆ-ತಡೆಗಳನ್ನು ನಿವಾರಣೆ ಮಾಡಲು ತ್ವರಿತ ಕ್ರಮಕ್ಕೆ ಮುಂದಾಗುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.

ರೈತರಿಗಾಗಿ ಸರ್ಕಾರ ನೀಡಿದ ನೀರು, ನೆಲ, ಡ್ಯಾಂ ಗಳನ್ನು ಖಾಸಗಿ ವಿದ್ಯುತ್ ಉತ್ಪಾದನೆಯವರಿಗೆ ನೀಡಿ, ವರ್ಷದ 365 ದಿನವೂ ವಿದ್ಯುತ್ ಉತ್ಪಾದನೆಗೆ ಅವಕಾಶ ನೀಡಿ, ಬಳಿಕ ಸರ್ಕಾರವೇ ಅವರಿಂದ ವಿದ್ಯುತ್ ಖರೀದಿ ಮಾಡುವ ಮೂಲಕ ಕೋಟ್ಯಾಂತರ ರೂ. ಲಾಭ ಮಾಡಿಕೊಳ್ಳಲು ಅವಕಾಶ ನೀಡಿ ವ್ಯವಸ್ಥಿತವಾಗಿ ಯೋಜನೆ ಅನುಷ್ಠಾನಗೊಳ್ಳಲು ವಿಳಂಭ ನೀತಿಯನ್ನು ಅನುಸರಿಸಲಾಗುತ್ತಿದೆ.

ಉಡುಪಿ ಸಮೀಪದಲ್ಲಿಯೇ ಸೀತಾ, ಸ್ವರ್ಣ, ಮಡಿಸಾಲು, ಉದ್ಯಾವರದಂತಹ ವರ್ಷಪೂರ್ತಿ ತುಂಬಿ ಹರಿಯುವ ಪ್ರಮುಖ ನಾಲ್ಕು ನದಿಗಳಿದ್ದರೂ, ವರಾಹಿ ನದಿಯಿಂದ ೩೯ ಕಿ.ಮೀ ದೂರದ ಬಜೆ ಎಂಬಲ್ಲಿಗೆ ರಸ್ತೆಯನ್ನು ಒಡೆದು ನೀರನ್ನು ಕೊಂಡು ಹೋಗಿ, ಅಲ್ಲಿ ನೀರನ್ನು ಶುದ್ದೀಕರಿಸಿ ಉಡುಪಿ ನಗರಕ್ಕೆ ನೀರನ್ನು ಒದಗಿಸುವ ಎನ್ನುವ ಪ್ರಾಸ್ತಾಪದ ಹಿಂದೆ ಖಾಸಗಿ ವಿದ್ಯುತ್ ಉತ್ಪಾದನೆಗೆ ಅವಕಾಶ ನೀಡುವ ಕುಟೀಲ ಹುನ್ನಾರದ ವಿರುದ್ಧ ರೈತರು ವಿರೋಧ ವ್ಯಕ್ತಪಡಿಸಿದ ಬಳಿಕ ಈ ಯೋಜನೆಯನ್ನು ಕೈ ಬಿಡಲಾಗಿದೆ. ವರಾಹಿ ಕಾಲುವೆ ನೀರನ್ನು ವರ್ಷಪೂರ್ತಿ ಶುದ್ದೀಕರಿಸಲು ಹಾಲಾಡಿಯಲ್ಲಿ ಅವಕಾಶಗಳಿದ್ದರೂ, ಅದನ್ನು ಪೂರ್ಣ ಪ್ರಮಾಣದಲ್ಲಿ ಬಳಿಸಿಕೊಳ್ಳದೆ 6 ತಿಂಗಳು ಕಾಲುವೆಯಿಂದ ಹಾಗೂ ಉಳಿದ 6 ತಿಂಗಳು ನದಿಯಿಂದ ನೀರು ಪಡೆಯಲು ನಿಗಮ ತೀರ್ಮಾನಿಸಿರುವುದು ಖಾಸಗಿ ಹಿತಾಸಕ್ತಿಯ ಪರವಾಗಿರುವ ಸಂಚಿನ ಭಾಗವಾಗಿದೆ.

ಬಲದಂಡೆ ಕಾಲುವೆ ಹಾದು ಹೋಗುವ ಶಂಕರನಾರಾಯಣ, ಅಂಪಾರು, ಕಾವ್ರಾಡಿ ಹಾಗೂ ಹಳ್ನಾಡು ಗ್ರಾಮಗಳಲ್ಲಿನ ಸುರಕ್ಷಿತ ಹಾಗೂ ಡೀಮ್ಡ್ ಅರಣ್ಯ ಪ್ರದೇಶಗಳನ್ನು ತಪ್ಪಿಸಿ ಮೂಲ ಯೋಜನೆಯಲ್ಲಿ ಅಚ್ಚುಕಟ್ಟು ಪ್ರದೇಶಗಳಿಗೆ ನಿರೂಣಿಸುವ ಪ್ರಸ್ತಾಪಕ್ಕೆ ಡಿ.ಪಿ.ಆರ್ ನಿಂದು ಅನುಮೋದನೆ ಪಡೆದುಕೊಂಡು ಅಂದಾಜು ಒಂದೂವರೆ ವರ್ಷದ ಕಾಲ ಮಿತಿಯಲ್ಲಿ ಯೋಜನೆ ಪೂರ್ಣ ಮಾಡುವ ಭರವಸೆ ವ್ಯಕ್ತಪಡಿಸಿದ್ದ ಇಲಾಖೆ, ಇದೀಗ ಖಾಸಗಿ ಅನುಕೂಲಕ್ಕಾಗಿ ಮೂಲ ಯೋಜನೆಯನ್ನೆ ಬದಲಾವಣೆ ಮಾಡುವ ಪ್ರಯತ್ನಕ್ಕೆ ಮುಂದಾಗಿದೆ. ಈ ಏತ ನೀರಾವರಿ ಯೋಜನೆ 73 ಕೋಟಿ ರೂ. ವೆಚ್ಚದ 1,300 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಟರ್ನ್ ಕೀ ಆಧಾರಿತ ಗುತ್ತಿಗೆ ನೀಡಿದ್ದರೂ, ಯಾವುದೆ ಅಚ್ಚುಕಟ್ಟು ಪ್ರದೇಶವನ್ನು ತೋರಿಸದೆ 7ಕಿ.ಮೀ ದೂರಕ್ಕೆ ಆಕ್ರಮ ಪೈಪ್ ಲೈನ್ ತೆಗೆದುಕೊಂಡು ಹೋಗುವ ಕಾರ್ಯವೂ ನಡೆದಿದೆ.

ಬಲದಂಡೆ ಕಾಲುವೆ ಯೋಜನೆಯ ಡಿ.ಪಿ.ಆರ್ ಗೆ ಅನುಮೋನೆ ನೀಡಿ, ಮೂಲ ಯೋಜನೆಯಂತೆ ಕಾಮಗಾರಿಗಳನ್ನು ಪ್ರಾರಂಭಿಸಿ, ಅದು ಪೂರ್ಣಗೊಂಡ ಬಳಿಕ, ಮೂಲ ಯೋಜನೆಯಲ್ಲಿ ಇಲ್ಲದ ಕಾಮಗಾರಿಗಳನ್ನು ಅವಶ್ಯಕತೆ ಹಾಗೂ ಆದ್ಯತೆಯ ಮೇರೆಗೆ ಪರಿಗಣಿಸಿ, ರೈತರಿಗಾಗಿ ನಿರ್ಮಿಸಿದ ಯೋಜನೆ ನೀರಾವರಿ ಉದ್ದೇಶಕ್ಕಾಗಿ ಬಳಕೆಯಾಗುವಂತೆ ಅವಕಾಶ ನೀಡಿ, ರೈತರಿಗೆ ನ್ಯಾಯ ಒದಗಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮ್ಯಾಂಗಲೋರಿಯನ್‌ ಪ್ರತಿನಿಧಿ ಜೊತೆ ಮಾತನಾಡಿದ ರೈತಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಶೆಟ್ಟಿ ಬಲಾಡಿ,  ಈ ಹಿಂದೆ ಯೋಜನೆಯ ಬಗ್ಗೆ ತನಿಖೆ ನಡೆಸಿದ್ದ ಉಪ ಲೋಕಾಯುಕ್ತರು ಒಬ್ಬ ವ್ಯಕ್ತಿಗಾಗಿ ಈ ಯೋಜನೆ ಕಾರ್ಯನಿರ್ವಹಿಸುತ್ತಿದೆ ಎಂದು ವರದಿ ನೀಡಿದ್ದರೂ, ಸರ್ಕಾರ ಅದನ್ನು ಪರಿಶೀಲನೆಗೂ ತೆಗೆದುಕೊಳ್ಳದೆ ಇರುವುದು ಈ ವ್ಯಕ್ತಿಯ ಹಿತಾಸಕ್ತಿಯ ಪ್ರಭಾವವನ್ನು ತೋರಿಸುತ್ತಿದೆ ಎಂದರು.

ರೈತರ ಹಿತಾಸಕ್ತಿಗೆ ಪೂರಕವಾಗಿರುವ ಮೂಲ ಯೋಜನೆಯಲ್ಲಿ ಪ್ರಾಸ್ತಾಪಿಸಲಾಗಿರುವ ಆಂಶಗಳನ್ನು ಕೈ ಬಿಟ್ಟು, ಖಾಸಗಿ ಹಿತಾಸಕ್ತಿಗೆ ಪೂರಕವಾಗಿರುವ ಹೊಸ ಹೊಸ ಪ್ರಾಸ್ತಾಪಗಳು ಮಂಜೂರಾಗುತ್ತಿರುವ ಹಿಂದಿನ ಸತ್ಯಗಳು ಬಹಿರಂಗವಾಗಬೇಕು. ಅಗತ್ಯವಾದರೆ ಸಮಾನ ಮನಸ್ಕರೊಂದಿಗೆ ಕಾನೂನು ಸಂಘರ್ಷದ ಬಗ್ಗೆ ಚಿಂತಿಸಬೇಕಾಗುತ್ತದೆ ಎಂದು ಕುಂದಾಪುರದ ವಕೀಲರಾದ ಉಮೇಶ್ ಶೆಟ್ಟಿ ಶಾನ್ಕಟ್ಟು ಹೇಳಿದರು.


Spread the love