ಲಕ್ಷ ದೀಪೋತ್ಸವ : ಮಣ್ಣಿನ ಮಡಕೆಗಳ ಪ್ರದರ್ಶನ
ಧರ್ಮಸ್ಥಳ: ವಸ್ತು ಪ್ರದರ್ಶನದ ಮಳಿಗೆಯಲ್ಲಿ ಹಳ್ಳಿಯ ವಾತವರಣ ಸೃಷ್ಟಿಯಾಗಿತ್ತು. ಎಲ್ಲೆಲ್ಲೂ ನೋಡಿದರೂ ಹಳ್ಳಿ ಸೊಗಡನ್ನು ಬಿಂಬಿಸುವ ವಸ್ತುಗಳು. ಅಳಿವಿನಂಚಿನಲ್ಲಿರುವ ಹಳ್ಳಿಯ ಕಸುಬುಗಳು ಉಳಿಸಿ ಬೆಳೆಸುವ ಸಂದೇಶ ಅಲ್ಲಿತ್ತು. ಲಕ್ಷ ದೀಪೋತ್ಸವದಲ್ಲಿದ್ದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರದರ್ಶನ ಮಳಿಗೆಯ ವಿಶೇಷತೆಗಳಿವು.
ಈ ಮಳಿಗೆಯಲ್ಲಿದ್ದ ಮಣ್ಣಿನ ದಿನೋಪಯೋಗಿ ವಸ್ತುಗಳ ಪ್ರದರ್ಶನ ಆಕರ್ಷಿಣೀಯವಾಗಿತ್ತು. ಇದರ ರೂವಾರಿ ಕಾರ್ಯತ್ತಡ್ಕದ ಮೋಟ ಕುಂಬಾರ. ದೀಪೋತ್ಸವಕ್ಕೆ ಬಂದ ಜನರಿಗೆ ಉತ್ಸಾಹದಿಂದ ವಿವರಣೆ ನೀಡುತ್ತಿದ್ದರು. 18 ವರ್ಷದಿಂದ ಮೋಟ ಕುಂಬಾರರು ಕುಂಬಾರ ವೃತ್ತಿಯನ್ನು ನಿರ್ವಹಿಸಿಕೊಂಡು ಬಂದಿದ್ದಾರೆ.
ಅಡಿಗೆ ಮಾಡುವ ಮಡಿಕೆಗಳು, ಮಣ್ಣಿನ ಓಲೆ, ನೀರಿನ ಹೂಜಿ, ಅಲಂಕಾರಿಕ ಹೂಜಿಗಳು ಮ್ಯಾಜಿಕ್ ದೀಪ, ದೋಸೆ ಕಾವಲಿಯನ್ನು ಮಾರಾಟ ಮಾಡಲಾಗುತ್ತಿತ್ತು.
ಈ ಕಸುಬು ಮೋಟ ಕುಂಬಾರರ ಅಜ್ಜನ ಕಾಲದಿಂದಲೇ ವಂಶ ಪರಂಪಾರ್ಯವಾಗಿ ಬೆಳೆದುಕೊಂಡು ಬಂದಿದೆ. ಇವರು ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ, ಶಿಶಿಲ, ಶಿಬಾಜೆ, ಕೊಕ್ಕಡ, ಪೂಣಜೆ ಕಡೆಗಳಿಗೆ ಮನೆ ಮನೆ ಹೋಗಿ ಮಾರಾಟ ಮಾಡಿಬರುತಿದ್ದರು. ಆದರೆ ಇತ್ತೀಚೆಗೆ ಮಣ್ಣಿನ ಮಡಿಕೆಗೆ ಬೇಡಿಕೆ ಕಡಿಮೆ ಆಗಿದೆ. ಈ ಕಸುಬಿನ ಕಡೆ ಯಾರೂ ಗಮನಕೊಡುತ್ತಿಲ್ಲ. ಕುಂಬಾರ ವೃತ್ತಿ ಅಳಿವಿನಂಚಿನಲ್ಲಿದೆ. ವಿನಾಶದಂಚಿನಲ್ಲಿರುವ ಈ ಕಸುಬನ್ನು ಉಳಿಸಿ ಬೆಳೆಸುವ ಕಾರ್ಯ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆಯಿಂದ ಸಾಧ್ಯವಾಗಿದೆ ಎಂಬುದು ಮೋಟ ಕುಂಬಾರರ ಮಾತು.
ಮಣ್ಣಿನ ಮಡಿಕೆ ಮಾಡಲು ಆವೆ ಮಣ್ಣನ್ನು ಬಳಸುತ್ತಾರೆ. ಆ ಆವೆ ಮಣ್ಣನ್ನು ದಿಡುಪೆಯಿಂದ ತರಲಾಗುತ್ತದೆ. ಮಣ್ಣ ಸರಬರಾಜು ಮಾಡುವ ಸಂದರ್ಭದಲ್ಲಿ ಟೆಂಪೋಗೆ 18,000 ಖರ್ಚು ತಗಲುವುದು ಎಂದರು
ಹಿಂದಿನ ಕಾಲದಲ್ಲಿ ಮಣ್ಣಿನ ಪಾತ್ರೆಯಲ್ಲಿ ಅಡಿಗೆ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಮಣ್ಣಿನ ಪಾತ್ರೆಗಳ ಬಳಕೆ ಕಡಿಮೆಯಾಗಿದೆ. ಮಣ್ಣಿನ ಪಾತ್ರೆಗಳ ಬಳಕೆಯ ಮಹತ್ವ ತಿಳಿಸಲಾಗುತ್ತಿದೆ ಎಂದು ಕೇಶವ ಕುಂಬಾರ ಹೇಳಿದರು.
ವರದಿ: ವಿನಿಷ ಉಜಿರೆ, ಚಿತ್ರಗಳು: ಯತಿರಾಜ್ ಬ್ಯಾಲಹಳ್ಳಿ