ಲಸಿಕಾ ಉತ್ಸವದಲ್ಲಿ ಪಿಎಂ- ಸಿಎಂ ಫೋಟೋ: ಪ್ರತಾಪ್ ಸಿಂಹ ಸಮರ್ಥನೆ

Spread the love

ಲಸಿಕಾ ಉತ್ಸವದಲ್ಲಿ ಪಿಎಂ- ಸಿಎಂ ಫೋಟೋ: ಪ್ರತಾಪ್ ಸಿಂಹ ಸಮರ್ಥನೆ

ಮೈಸೂರು: ಎಲ್ಲ ಸರ್ಕಾರಗಳಲ್ಲೂ ಆಯಾಯ ಸಂದರ್ಭಕ್ಕೆ ತಕ್ಕಂತೆ ಯೋಜನೆಗಳಿಗೆ ಜನಪ್ರತಿನಿಧಿಗಳ ಫೋಟೋ ಹಾಕಿಕೊಳ್ಳುವ ವಾಡಿಕೆ ಹಿಂದಿನಿಂದಲೂ ಬಂದಿದ್ದು, ಪಕ್ಷದ ಬಾವುಟ ಹಾಕಿಕೊಳ್ಳುವುದು ತಪ್ಪು ಆದರೆ ಜನಪ್ರತಿನಿಧಿಗಳ ಫೋಟೋ ಹಾಕುವುದರಲ್ಲಿ ಯಾವ ತಪ್ಪು ಇಲ್ಲ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಲಸಿಕಾ ಉತ್ಸವದಲ್ಲಿ ಪ್ರಧಾನಮಂತ್ರಿ, ಸಿಎಂ ಫೋಟೋ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಮರ್ಥನೆ ನೀಡಿದ ಅವರು, ಹಿಂದೆ ಉಪ್ಪು, ಸಕ್ಕರೆ ಅಕ್ಕಿ ಏನೇ ಕೊಟ್ಟರು ಅದರ ಮೇಲೆ ಸಿದ್ದರಾಮಯ್ಯ ತಮ್ಮ ಫೋಟೋ ಹಾಕಿಸಿಕೊಳ್ಳುತ್ತಿರಲಿಲ್ಲವೆ ಎಂದು ಪ್ರಶ್ನಿಸಿದರು.

ಕಾಸರಗೋಡಿನಲ್ಲಿ ಹಲವು ಊರುಗಳ ಹೆಸರನ್ನು ಕೇರಳ ಮಲೆಯಾಳಂ ಭಾಷೆಗೆ ಬದಲಾಯಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಸರಗೋಡಿನಲ್ಲಿ ಕನ್ನಡವನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವ ಹುನ್ನಾರ ನಡೆಯುತ್ತಿದ್ದು, ಈ ವಿಚಾರದಲ್ಲಿ ಕನ್ನಡಪರ ಸಂಘಟನೆಗಳು, ಸಾಹಿತಿಗಳು, ರಾಜಕೀಯ ಪಕ್ಷಗಳು ಧ್ವನಿ ಎತ್ತಬೇಕು ಅಲ್ಲದೆ ಕರ್ನಾಟಕ ಸರ್ಕಾರ ಕೇರಳ ಸರ್ಕಾರದ ಮೇಲೆ ಒತ್ತಡ ಹಾಕಿ ಹೆಸರು ಬದಲಾವಣೆ ಮಾಡುತ್ತಿರುವ ಕೆಲಸವನ್ನು ತಡೆಯಬೇಕು ಎಂದು ಹೇಳಿದರು.

ಕಾಸರಗೋಡು ಕರ್ನಾಟಕದ್ದು- ಆದರೂ ಹಲವು ವರ್ಷಗಳಿಂದ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದ್ದೇವೆ.ಆದರೆ ಈಗ ಅಲ್ಲಿನ ಸರ್ಕಾರ, ಆ ಭಾಗದಿಂದ ಕನ್ನಡವನ್ನೇ‌ ಸಂಪೂರ್ಣ ನಾಶ ಮಾಡಲು ಪ್ರಯತ್ನ ಮಾಡುತ್ತಿದ್ದು, ಇದನ್ನು ಇನ್ನು ಸಹಿಸಲು ಸಾಧ್ಯವಿಲ್ಲ. ನಮ್ಮ ಒತ್ತಡದ ಧ್ವನಿಯನ್ನು ಕೇಂದ್ರ ಸರ್ಕಾರದ ವರೆಗೂ ತಲುಪಿಸಬೇಕಲ್ಲದೆ, ಈ ವಿಚಾರದಲ್ಲಿ ಸ್ವಾಭಿಮಾನಿ‌ ಕನ್ನಡಿಗರಾಗಿ ಹೋರಾಟದ ಧ್ವನಿಯನ್ನು ಎತ್ತಬೇಕಿದೆ ಎಂದರು.

ಕೇಂದ್ರ ಸಚಿವ ಸಂಪುಟಕ್ಕೆ ತಮ್ಮ ಹೆಸರು ಪ್ರಸ್ತಾಪ ವಿಚಾರಕ್ಕೆ ಸಂಬಂಧಿಸಿದಂತೆ ಗಮನಸೆಳೆದಾಗ ಮೈಸೂರು-ಕೊಡಗು ಜನ ನನಗೆ ಸಂಸದನ ಸ್ಥಾನ ನೀಡಿದ್ದಾರೆ, ನನಗಷ್ಟೇ ಸಾಕು. ಪ್ರತಿಯೊಬ್ಬರಿಗೂ ಆಸೆಗಳಿರುತ್ತವೆ. ಸಂಸದನಾದ ಬಳಿಕ ಸಚಿವ, ಸಿಎಂ ಆಗ್ಬೇಕು ಅನ್ನೋ ಆಸೆ ಇರುತ್ತದೆ ಆದರೆ ತಮಗೆ ಕೊಟ್ಟಿರುವ ಸ್ಥಾನದಲ್ಲಿ ಮುಂದುವರಿಯುವುದು ಉತ್ತಮ ಎಂದರು.

ನಗರದಲ್ಲಿ ಭುಗಿಲೆದ್ದಿರುವ ಎನ್. ಟಿ.ಎಂ ಶಾಲೆ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ಇಚ್ಚಿಸದ ಅವರು ವಿಷಯಾಂತರ ಮಾಡಬೇಡಿ ಆ ಬಗ್ಗೆ ಪ್ರತ್ಯೇಕವಾಗಿ ಮಾತನಾಡೋಣ ಎನ್ನುವ ಮೂಲಕ ಅದನ್ನು ಬದಿಗೆ ಸರಿಸಿ ಕಾಸರಗೋಡು ವಿಷಯದತ್ತ ಚಿತ್ತ ಹರಿಸಿದರು.


Spread the love