ಲಾಕ್‌ಡೌನ್‌: ಶಿರ್ವ ಪರಿಸರ ಸಂಪೂರ್ಣ ಬಂದ್‌

Spread the love

ಲಾಕ್‌ಡೌನ್‌: ಶಿರ್ವ ಪರಿಸರ ಸಂಪೂರ್ಣ ಬಂದ್‌

ಶಿರ್ವ: ಶಿರ್ವ ಗ್ರಾ.ಪಂ. ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್‌ ಪ್ರಕರಣಗಳಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರ ಆದೇಶದಂತೆ ಗ್ರಾ.ಪಂ. ವ್ಯಾಪ್ತಿಯಲ್ಲಿ 5 ದಿನಗಳ ಕಾಲ ಲಾಕ್‌ಡೌನ್‌ ವಿಧಿಸಲಾಗಿದ್ದು ಬುಧವಾರ ವ್ಯಾಪಾರ,ವ್ಯವಹಾರ ಸಂಪೂರ್ಣ ಬಂದ್‌ ಆಗಿತ್ತು.

 

ಮೆಡಿಕಲ್‌,ಆಸ್ಪತ್ರೆ, ಪೆಟ್ರೋಲ್‌ ಪಂಪ್‌ ಹೊರತುಪಡಿಸಿ ಬ್ಯಾಂಕ್‌,ಪಡಿತರ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಕಚೇರಿ,ವ್ಯಾಪಾರ ವಹಿವಾಟುಗಳಿಗೆ ನಿಷೇಧ ಹೇರಲಾಗಿತ್ತು. ನಿಗದಿತ ವೇಳೆಯಲ್ಲಿ ಹಾಲು ವಿತರಣೆ ಮತ್ತು ಹಾಲು ಡೈರಿಗೆ ಹಾಕುವುದು ಹಾಗೂ ಮಲ್ಲಿಗೆ ಕೃಷಿ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿತ್ತು.

ಆರೋಗ್ಯದ ವಿಚಾರಕ್ಕೆ ಸಂಬಂಧಪಟ್ಟಂತೆ ಆಸ್ಪತ್ರೆಗೆ ತೆರಳಲು ಹಾಗೂ ಅಗತ್ಯ ಔಷಧಿಗಳನ್ನು ಮೆಡಿಕಲ್ ಗೆ ಹೋಗಿ ಕೊಂಡುಕೊಳ್ಳಲು ಬೆರಳೆಣಿಕೆಯ ಜನರು ತಿರುಗಾಡುವುದನ್ನು ಹೊರತುಪಡಿಸಿ ಶಿರ್ವ ಬಹುತೇಕ ಲಾಕ್ ಆಗಿತ್ತು.

ಶಿರ್ವದ ಗಡಿ ಪ್ರದೇಶಗಳಲ್ಲಿ ಶಿರ್ವ ಪೊಲೀಸ್ ಠಾಣೆಯ ದಕ್ಷ ಠಾಣಾಧಿಕಾರಿ ಶ್ರೀ ಶೈಲ ಆರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪೊಲೀಸ್ ಸಿಬ್ಬಂದಿಗಳು ಕೂಡ ಅಷ್ಟೇ ಕಟ್ಟುನಿಟ್ಟಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವುದು ಕಂಡು ಬಂತು. ಬುಧವಾರ ಮುಂಜಾನೆಯಿಂದಲೇ ಆಯಕಟ್ಟಿನ ಪ್ರದೇಶದಲ್ಲಿ ಪೊಲೀಸರು ಬಿಗು ತಪಾಸಣೆ ನಡೆಸುತ್ತಿದ್ದು, ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ತಡೆದು ಕೇಸು ದಾಖಲಿಸುತ್ತಿದ್ದರು.

ಲಾಕ್ ಡೌನ್ ಕುರಿತು ಪ್ರತಿಕ್ರಿಯಿಸಿದ ಗ್ರಾಪಂ ಅಧ್ಯಕ್ಷ ಕೆ ಆರ್ ಪಾಟ್ಕರ್ ಮಾತನಾಡಿ ಶಿರ‍್ವ ಗ್ರಾಮಪಂಚಾಯತ್ ನಲ್ಲಿ 50 ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಕಂಡು ಬಂದ ಹಿನ್ನಲೆಯಲ್ಲಿ ಸಂಪೂರ‍್ಣ ಲಾಕ್ ಡೌನ್ ಘೋಷಣೆ ಮಾಡಿದ್ದು ಇದಕ್ಕೆ ಪಂಚಾಯತ್ ವತಿಯಿಂದ ಎಲ್ಲಾ ರೀತಿಯ ತಯಾರಿ ಮಾಡಲಾಗಿದೆ. ಲಾಕ್ ಡೌನ್ ಗೆ ಮುಂಚಿತವಾಗಿ ಜನರಿಗೆ ಮೈಕ್ ಮೂಲಕ ಪ್ರಚಾರ ಮಾಡಿದ್ದು ಇಂದು ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಪೂರ‍್ಣವಾಗಿ ಮುಚ್ಚಲಾಗಿದೆ. ಸಾರ‍್ವಜನಿಕರು ಈಗಾಗಲೇ ಉತ್ತಮ ಸಹಕಾರ ನೀಡಿದ್ದು ಮುಂದಿನ ೭ ನೇ ತಾರೀಕಿನ ವರೆಗೆ ಇದೇ ಸಹಕಾರ ನೀಡಬೇಕು ಎಂದರು
ಇದೇ ವೇಳೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಶಿರ್ವ ಠಾಣಾಧಿಕಾರಿ ಶ್ರೀಶೈಲ ಅವರು ನಮ್ಮ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ಮೂರು ಪಂಚಾಯತ್ ಗಳಾದ ಶಿರ್ವ, ಬೆಳ್ಳೆ ಮತ್ತು ಬೆಳಪು ಪಂಚಾಯತ್ ಗಳನ್ನು ಲಾಕ್ ಡೌನ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮೂರು ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಬ್ಯಾರಿಕೇಡ್ ಹಾಕಿ ಚೆಕ್ ಪೋಸ್ಟ್ ಗಳನ್ನು ಮಾಡಲಾಗಿದೆ. ಈ ಲಾಕ್ ಡೌನ್ ಅವಧಿಯಲ್ಲಿ ಅಗತ್ಯ ವೈದ್ಯಕೀಯ ಸೇವೆಗಳಿಗೆ ತೆರಳುವವರಿಗೆ ಅವಕಾಶವಿದ್ದು, ಅನಗತ್ಯವಾಗಿ ತಿರುಗಾಡುವವರ ವಾಹನಗಳನ್ನು ಸೀಝ್ ಮಾಡಲಾಗುತ್ತದೆ. ಪೋಲಿಸರ ಕರ್ತವ್ಯಕ್ಕೆ ಸ್ಥಳೀಯ ಪಂಚಾಯತ್ ಗಳು ಸಂಪೂರ‍್ಣ ಸಹಕಾರ ನೀಡಿದ್ದು ಜನರು ಕೂಡ ಅರ್ಥ ಮಾಡಿಕೊಂಡು ಸಹಕಾರ ನೀಡಬೇಕು. ಪೋಲಿಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವುದು ಜನರ ಸುರಕ್ಷತೆಗಾಗಿ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಸಹಕರಿಸುವಂತೆ ಮನವಿ ಮಾಡಿದರು.

Pics By Wilson Shirva


Spread the love