ಲಾಕ್ ಡೌನ್ ಪ್ಯಾಕೇಜ್ ಗೆ ಆಗ್ರಹಿಸಿ ಪ್ರತಿಭಟನೆ

Spread the love

ಲಾಕ್ ಡೌನ್ ಪ್ಯಾಕೇಜ್ ಗೆ ಆಗ್ರಹಿಸಿ ಪ್ರತಿಭಟನೆ

ಕುಂದಾಪುರ: ಅಕ್ಷರ ದಾಸೋಹ ನೌಕರರಿಗೆ ಲಾಕ್ ಡೌನ್ ಅವಧಿಯಲ್ಲಿ ಪ್ಯಾಕೇಜ್ ಘೋಷಣೆ ಮಾಡದಿರುವುದನ್ನು ಖಂಡಿಸಿ ಹಾಗೂ ಮೂರು ತಿಂಗಳ ವೇತನ ಬಿಡುಗಡೆಗೆ ಆಗ್ರಹಿಸಿ ಇಂದು ತಾಲೂಕಿನಾದ್ಯಂತ ಅಕ್ಷರ ದಾಸೋಹ ನೌಕರರು ಪ್ರತಿಭಟಿಸಿದರು.

ಕುಂದಾಪುರದ ತಾಲೂಕು ಪಂಚಾಯತ್ ಕಛೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ತಾಲೂಕು ಮುಖಂಡರಾದ ಸಿಂಗಾರಿ ಮಾತನಾಡಿ, ಜೀವನವಿಡೀ ಈ ದೇಶದ ಮಕ್ಕಳ ಸೇವೆ ಮಾಡುವ ನೌಕರರ ಕೆಲಸಕ್ಕೆ ಗೌರವಯುತ ವೇತನ ನೀಡದೇ ಸರ್ಕಾರ ಶೋಷಣೆ ನಡೆಸುತ್ತಿದೆ. ಅಕ್ಷರ ದಾಸೋಹ ನೌಕರರಿಗೆ ಲಾಕ್ ಡೌನ್ ಅವಧಿಯಲ್ಲಿ ಸರಕಾರ ಯಾವುದೇ ಪ್ಯಾಕೇಜ್ ಕೂಡ ನೀಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರ ಕಳೆದ ಮೂರು ತಿಂಗಳ ವೇತನವನ್ನು ಕೂಡಲೇ ಖಾತೆಗಳಿಗೆ ಜಮೆ ಮಾಡಬೇಕು. ಕೊರೋನ ಸಂಕಷ್ಟದಲ್ಲಿರುವ ನೌಕರರಿಗೆ ವೇತನ ಅಗತ್ಯವಿದೆ ಎಂದ ಅವರು ಎಲ್ಲಾ ನೌಕರರಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡಬೇಕು. ನಿವೃತ್ತಿಯಾಗುವ ನೌಕರರಿಗೆ ಪಿಂಚಣಿ ಜಾರಿ ಮಾಡಲು ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಕುಂದಾಪುರದ ಸೌಕೂರು, ವಡೇರಹೋಬಳಿ, ಕೊಲ್ಲೂರು, ಮೂಡ್ಲಕಟ್ಟೆ, ಬಡಾಕೆರೆ, ಹಾಲಾಡಿ, ತಲ್ಲೂರು, ಹೆಮ್ಮಾಡಿ, ವಂಡ್ಸೆ ಮುಂತಾದ ಶಾಲೆಗಳಲ್ಲಿ ನೌಕರರು ಪ್ರತಿಭಟನೆ ನಡೆಸಿದರು.

ವಿವಿಧೆಡೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ಎಚ್ ನರಸಿಂಹ, ನಾಗರತ್ನ, ನೌಕರರ ಮುಖಂಡರಾದ ಉಷಾ, ಶ್ಯಾಮಲ, ಸರೋಜ, ಶ್ರೀಮತಿ ಇದ್ದರು.


Spread the love