ಲಾಬಿಗೆ ಮಣಿದು ಶಾಲೆಗಳನ್ನು ಆರಂಭಿಸಿ ಮಕ್ಕಳ ಜೀವನದೊಂದಿಗೆ ಚೆಲ್ಲಾಟ ಸರಿಯಲ್ಲ- ಅನ್ಸಾರ್ ಅಹ್ಮದ್

Spread the love

ಲಾಬಿಗೆ ಮಣಿದು ಶಾಲೆಗಳನ್ನು ಆರಂಭಿಸಿ ಮಕ್ಕಳ ಜೀವನದೊಂದಿಗೆ ಚೆಲ್ಲಾಟ ಸರಿಯಲ್ಲ- ಅನ್ಸಾರ್ ಅಹ್ಮದ್

ಉಡುಪಿ: ಖಾಸಗಿ ಲಾಬಿಗೆ ಮಣಿದು ಶಾಲೆಗಳನ್ನು ಆರಂಭಿಸಿ ಮಕ್ಕಳ ಜೀವನದೊಂದಿಗೆ ಚೆಲ್ಲಾಟ ಸರಿಯಲ್ಲ ಎಂದು ಕರ್ನಾಟಕ ರಕ್ಷಾಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಹೇಳಿದ್ದಾರೆ.

ರಾಜ್ಯ ಸರ್ಕಾರ ಇದೀಗ ಜನವರಿ ಒಂದರಿಂದ ಶಾಲೆಗಳನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆಸಿದೆ. ಭಾರತದಾದ್ಯಂತ ಕೊರೋನಾದ ಎರಡನೇ ಅಲೆ ಹಾಗೂ ಬ್ರಿಟನ್ನಲ್ಲಿ ರೂಪಾಂತರ ಗೊಂಡಿರುವ ವೈರಸ್ ಹರಡುತ್ತಿರುವ ಈಗಿನ ಪರಿಸ್ಥಿತಿಯಲ್ಲಿ ಶಾಲೆಗಳನ್ನು ತೆರೆಯುವ ನಿರ್ಧಾರ ಎಷ್ಟು ಸರಿ ಎಂಬ ಪ್ರಶ್ನೆ ಪೋಷಕರನ್ನು ಹಾಗೂ ಪ್ರಜ್ಞಾವಂತ ನಾಗರಿಕರನ್ನು ಕಾಡುತ್ತಿದೆ.

ಕೊರೋನಾ ಆರಂಭವಾದ ದಿನಗಳಲ್ಲಿ ತೋರಿದ ಅಸಡ್ಡೆಯಿಂದಾಗಿ ಎದುರಿಸಿರುವ ಕಷ್ಟಗಳನ್ನು ನೋಡಿ ಇನ್ನೂ ಬುದ್ಧಿ ಕಲಿಯದ ಸರಕಾರ ಈಗ ಶಾಲೆಗಳನ್ನು ಆರಂಭಿಸಿ ಮಕ್ಕಳ ಜೀವನದೊಂದಿಗೆ ಚೆಲ್ಲಾಟವಾಡುವ ಕೆಲಸಕ್ಕೆ ಕೈ ಹಾಕಿದೆ.

ಸರ್ಕಾರ ತನ್ನ ಮೊಂಡು ಹಠಕ್ಕೆ ಬಿದ್ದು ಯಾ ಖಾಸಗಿ ಶಾಲೆಗಳ ಲಾಬಿಗೆ ಮಣಿದು ಶಾಲೆಗಳನ್ನು ಪುನರಾರಂಭಿಸುವ ನಿರ್ಧಾರ ಕೈಗೊಂಡರೆ ಅದು ಸರಕಾರದ ಸರ್ವಾಧಿಕಾರತ್ವ ಧೋರಣೆಯನ್ನು ಎತ್ತಿ ತೋರಿಸುತ್ತದೆ.

ಪೋಷಕರ ಒಪ್ಪಿಗೆ ಪತ್ರ ಪಡೆದುಕೊಂಡು ತರಗತಿಗಳನ್ನು ಆರಂಭಿಸಲು ನಿರ್ದೇಶನ ನೀಡಿರುವ ಸರಕಾರ ತಾನು ಯಾವುದೇ ರೀತಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ಧವಿಲ್ಲ.

ಸರ್ಕಾರದ ಈ ನಿರ್ಧಾರದಿಂದ ಮುಂದೆ ಮಕ್ಕಳ ಜೀವಕ್ಕೆ ಏನಾದರೂ ಅನಾಹುತ ಸಂಭವಿಸಿದ್ದೇ ಆದಲ್ಲಿ ಅದರ ಸಂಪೂರ್ಣ ಹೊಣೆಗಾರಿಕೆಯನ್ನು ಸರಕಾರ ಹೊರ ಬೇಕಾಗಿರುತ್ತದೆ.

ಆದ್ದರಿಂದ ಸರ್ಕಾರ ಈಗಿನ ಕೃಷಿ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳನ್ನು ಆರಂಭಿಸುವ ನಿರ್ಧಾರವನ್ನು ಕೈಬಿಟ್ಟು ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಗಳನ್ನು ಆರಂಭಿಸುವ ನಿರ್ಧಾರವನ್ನು ತೆಗೆದು ಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಘಟಕ ಸರ್ಕಾರವನ್ನು ಆಗ್ರಹಿಸುತ್ತಿದೆ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love