ಲಾರ್ವಾ ತಾಣಗಳು ಕಂಡುಬಂದರೆ ದಂಡ: ಮಹಾನಗರಪಾಲಿಕೆ ಆಯುಕ್ತರ ಸೂಚನೆ
ಮಂಗಳೂರು: ಡೆಂಗ್ಯು ಜ್ವರ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಅದರ ನಿಯಂತ್ರಣ ನಮ್ಮೆಲ್ಲರ ಹೊಣೆಯಾಗಿರುತ್ತದೆ. ಈಡೀಸ್ ಸೊಳ್ಳೆಗಳಿಂದ ಹರಡುವ ಕಾಯಿಲೆ ಮುಂಗಾರು/ ಮುಂಗಾರಿನ ನಂತರ ಕಾಣಸಿಗುತ್ತಿದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಇಡೀ ವರ್ಷ ಪ್ರಕರಣಗಳು ಕಂಡು ಬರುತ್ತಿವೆ. ಬಿಟ್ಟು ಬಿಟ್ಟು ಸುರಿವ ಮಳೆಯಿಂದ ಈಡೀಸ್ ಸೊಳ್ಳೆಗಳ ಉತ್ಪತ್ತಿ ತಾಣಗಳ ಸಂಖ್ಯೆಯು ಹೆಚ್ಚಾಗುತ್ತಿದ್ದು, ಡೆಂಗ್ಯು ಜ್ವರ ಪ್ರಕರಣಗಳು ಹೆಚ್ಚಾಗುತ್ತಿದೆ. ಡೆಂಗ್ಯು ಜ್ವರವು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಕಾಡುತ್ತಿದ್ದು, ಸಾಂಕ್ರಾಮಿಕ ಸ್ಫೋಟದ ಸಾಧ್ಯತೆಯ ಅಧಿಕವಾಗಬಹುದು. ಆದ್ದರಿಂದ ಮಹಾನಗರ ಪಾಲಿಕೆಯಲ್ಲಿ ಸಕ್ರೀಯವಾಗಿ ತಂಡವಾರು ಲಾರ್ವ ಸಮೀಕ್ಷೆಯೊಂದಿಗೆ ಸಂಪೂರ್ಣ ಲಾರ್ವ ಉತ್ಪತ್ತಿ ತಾಣಗಳ ನಿಯಂತ್ರಣದೊಂದಿಗೆ ಆರೋಗ್ಯ ಜಾಗೃತಿ ಮನೆಮನೆಗೂ ಕ್ಷೇತ್ರ ಭೇಟಿಯೊಂದಿಗೆ ಮುಟ್ಟಿಸಬೇಕು. ಅದೇ ರೀತಿ ಲಾರ್ವ ಉತ್ಪತ್ತಿ ತಾಣಗಳು ಕಂಡುಬಂದ ಕಟ್ಟಡ/ ಮನೆ ಹಾಗೂ ಅಪಾರ್ಟ್ಮೆಂಟ್ಗಳಿಗೆ ಸಂಬಂಧಿಸಿ ದಂಡವನ್ನು ವಿಧಿಸಬೇಕು ಎಂದು ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಸೂಚಿಸಿದ್ದಾರೆ.
ಅವರು ಮಹಾನಗರಪಾಲಿಕೆ ಕಚೇರಿಯಲ್ಲಿ ಮಂಗಳವಾರ ನಡೆದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ನಗರ ಮಟ್ಟದ ಚಾಲನಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಮಗಾರಿ ನಡೆಸುತ್ತಿರುವ ಕಟ್ಟಡಗಳು/ ಕಾಮಗಾರಿ ನಿಲ್ಲಿಸಿರುವ ಕಟ್ಟಡಗಳ ಸುತ್ತಮುತ್ತಲು ಲಾರ್ವ ಉತ್ಪತ್ತಿಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಂಬಂಧಿಸಿದ ಕ್ರೆಡಾಯಿ ಸಂಸ್ಥೆಯವರು ಹೆಚ್ಚಿನ ಗಮನ ಹರಿಸುವಂತೆ, ಜಾಗೃತಿ ಮೂಡಿಸುವಂತೆ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಅದೇ ರೀತಿ ಕಸ/ ತ್ಯಾಜ್ಯ ವಿಲೇವಾರಿ ಮಾಡುವ ವಾಹನದ ಮೂಲಕ ಜಾಗೃತಿ ಮೂಡಿಸಲು ಅವರು ಸೂಚಿಸಿದರು.
ಹೊರ ರಾಜ್ಯಗಳಿಂದ ಬರುವ ಕಾರ್ಮಿಕರಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿರುವ ಕಾರಣ ಇದರ ಬಗ್ಗೆ ಹೆಚ್ಚಿನ ಗಮನಹರಿಸಲು ಸೂಚಿಸಿದರು. ಅಲ್ಲದೆ ಶಾಲಾ ಕಾಲೇಜು, ನರ್ಸಿಂಗ್ ಕಾಲೇಜು, ವೈದ್ಯಕೀಯ ಕಾಲೇಜು, ಪ್ರತಿಯೊಂದು ಸರ್ಕಾರಿ/ ಖಾಸಗಿ ಸಂಸ್ಥೆ/ ಕಚೇರಿಗಳಲ್ಲಿ ಅರಿವು ಮೂಡಿಸುಬೇಕು. ಪ್ರತಿಯೊಬ್ಬ ನಾಗರೀಕರು ಪರಿಸರ ಸ್ವಚ್ಚತೆ ಸೊಳ್ಳೆಗಳ ನಿಯಂತ್ರಣದೊಂದಿಗೆ ಮನೆಯಲ್ಲಿ ಸೊಳ್ಳೆ ನಿರೋಧಕ ಜಾಲರಿಗಳನ್ನು ಅಳವಡಿಸುವ ಬಗ್ಗೆ ಸೂಚನೆ ನೀಡಿದರು.
ಮನೆ/ಕಛೇರಿಯಲ್ಲಿನ ಏರ್ಕೂಲರ್, ರೆಫ್ರಿಜರೇಟರ್ ಹಾಗೂ ಅಲಂಕಾರಿಕ ಹೂಕುಂಡ, ಗಿಡಗಳ ತಟ್ಟೆಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಮನೆ/ಕಛೇರಿಗಳ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ ಹಾಗೂ ಘನತ್ಯಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದರು.
ರೇಬಿಸ್ ಬಗ್ಗೆ ಜಾಗೃತಿ – ಜೀವ ರಕ್ಷಣೆಯ ಅವಶ್ಯಕತೆ
ಕಳೆದ 3 ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದಾಗ ನಾಯಿಕಡಿತ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಸರಿಯಾದ ಸಮಯದಲ್ಲಿ ಲಸಿಕೆ ಪಡೆಯುವ ಬಗ್ಗೆ ಜಾಗೃತಿ ಮೂಡಿಸುವಂತೆ ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಸೂಚಿಸಿದರು. ಬೀದಿ ನಾಯಿಗಳ ಕಡಿತಕ್ಕಿಂತ ಸಾಕು ನಾಯಿಗಳ ಕಡಿತ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದೆ. ರೇಬಿಸ್ ಒಂದು ಗಂಭೀರವಾದ ವೈರಲ್ ರೋಗವಾಗಿದ್ದು, ಸೋಂಕಿತ ಪ್ರಾಣಿಗಳಾದ ನಾಯಿ, ಬೆಕ್ಕುಗಳಿಂದ ಈ ರೋಗ ಹರಡುವ ಸಾಧ್ಯತೆ ಹೆಚ್ಚು ಎಂದು ಅವರು ಹೇಳಿದರು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ ಲಭ್ಯವಿದೆ. ಪಶುಪಾಲನಾ ಇಲಾಖೆಯ ಸಹಕಾರದಿಂದ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕಾ ಶಿಬಿರಗಳು ನಡೆಯುತ್ತಿದ್ದು, ಅದರ ಸದುಪಯೋಗವನ್ನು ಸಾರ್ವಜನಿಕರು ಪಡೆಯುವಂತೆ ಅವರು ತಿಳಿಸಿದರು. ಸಾರ್ವಜನಿಕರು ರೇಬಿಸ್ ಬಗ್ಗೆ ಜಾಗೃತರಾಗಿರಬೇಕು ಮತ್ತು ಸರಿಯಾದ ಸಮಯದಲ್ಲಿ ವೈದ್ಯಕೀಯ ಸಲಹೆ ಪಡೆಯಬೇಕು ಎಂದು ಅವರು ಸೂಚಿಸಿದ್ದಾರೆ. ನಾಯಿಮರಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಡುವುದರಿಂದ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಸಾಕು ನಾಯಿಗಳ ಪೋಷಕರು ಗಮನ ಹರಿಸುವಂತೆ ಅಧ್ಯಕ್ಷರು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಹೆಚ್.ಆರ್ ತಿಮ್ಮಯ್ಯ, ಆರ್.ಸಿ.ಹೆಚ್ ಅಧಿಕಾರಿ ಡಾ.ರಾಜೇಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನವೀನ್ ಚಂದ್ರ ಕುಲಾಲ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ ಉಳೆಪಾಡಿ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.