ಲೂಟಿ ಭಾಗ್ಯ ಯೋಜನೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ – ರಮೇಶ್ ಕಾಂಚನ್

Spread the love

ಲೂಟಿ ಭಾಗ್ಯ ಯೋಜನೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ – ರಮೇಶ್ ಕಾಂಚನ್

ಉಡುಪಿ: ಕಾಂಗ್ರೆಸ್ ಪಕ್ಷವು ನೀಡಿರುವ ಗ್ಯಾರಂಟಿ ಕಾರ್ಡ್ ಪ್ರಯೋಜನಕ್ಕೆ ಬಾರದ ವಿಸಿಟಿಂಗ್ ಕಾರ್ಡ್ ಇದ್ದಂತೆ ಎಂದು ಹೇಳಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಹೇಳಿಕೆ ಅವರ ಹತಾಶ ಭಾವನೆಯನ್ನು ತೋರಿಸುತ್ತದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.

ರಾಜ್ಯಾದ್ಯಂತ ಬಿಜೆಪಿ ಸರಕಾರ 40% ಕಮೀಷನ್ ಸರಕಾರ ಎಂಬ ಅಪಖ್ಯಾತಿಗೆ ಪಾತ್ರವಾಗಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಖುದ್ದು ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ದೂರಿದ್ದರು. ಈ ಆರೋಪ ಕೇಳಿ ಬಂದ ನಂತರ ಎಂಟು ಬಾರಿ ಪ್ರಧಾನ ಮಂತ್ರಿಗಳು ಕರ್ನಾಟಕಕ್ಕೆ ಬಂದು ಹೋಗಿದ್ದಾರೆ ಆದರೆ ಎಲ್ಲಿ ಕೂಡ ಭ್ರಷ್ಟ ಸರ್ಕಾರದ ವಿರುದ್ದ ಧನಿ ಎತ್ತುವ ಧೈರ್ಯ ಮಾಡಿಲ್ಲ. ಹಿಂದೆ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ ಮರುಕ್ಷಣವೇ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದ್ದರು ಆದರೆ ಬಿಜೆಪಿ ಸರಕಾರ ಹಿಂದೆ ನೀಡುತ್ತಿದ್ದ 7 ಕೆ.ಜಿ ಅಕ್ಕಿಯನ್ನು 5 ಕೆ.ಜಿಗೆ ಇಳಿಸಿದೆ. ಇದಲ್ಲದೆ ಕ್ಷೀರಭಾಗ್ಯ, ಶೂಭಾಗ್ಯ, ಪಶುಭಾಗ್ಯ, ಇಂದಿರಾ ಕ್ಯಾಂಟಿನ್ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ರಾಜ್ಯಕ್ಕೆ ನೀಡಿದ ಕೀರ್ತಿ ಕಾಂಗ್ರೆಸ್ ಪಕ್ಷದ್ದಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಜನರಿಗೆ ಜನಪರ ಯೋಜನೆಗಳನ್ನು ನೀಡುವ ಬದಲು ಜನರಿಂದಲ್ಲೇ ಹಣವನ್ನು ಲೂಟುವ ಮೂಲಕ ಲೂಟಿ ಭಾಗ್ಯ ಯೋಜನೆ ನೀಡಿದ ಕೀರ್ತಿ ಇದ್ದರೆ ಅದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಸಲ್ಲುತ್ತದೆ.

ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದ್ದು ಈ ಹಿಂದೆ ನೀಡಿದ ಭರವಸೆಗಳನ್ನು ಈಡೇರಿಸಿದ್ದು ಈ ಬಾರಿ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್, ಮಹಿಳೆಯರಿಗೆ ರೂ. 2000 ಹಾಗೂ ಅನ್ನಭಾಗ್ಯದ ಗ್ಯಾರಂಟಿ ನೀಡಿದ್ದು ಜನರು ಇದರಿಂದ ಕಾಂಗ್ರೆಸ್ ಪಕ್ಷದತ್ತ ಒಲವು ತೋರುತ್ತಿದ್ದು ಇದರಿಂದ ಬಿಜೆಪಿ ಸಂಪೂರ್ಣ ಹೆದರಿದ್ದು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುತ್ತಿದೆ. ರಾಜ್ಯದ ಜನರು ಪ್ರಜ್ಞಾವಂತರಾಗಿದ್ದು ಬಿಜೆಪಿಯ ಸುಳ್ಳು ಆರೋಪಗಳಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ. ಬೊಮ್ಮಾಯಿಯವರೇ, ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ಕನಸು. ಮುಂದಿನ ದಿನಗಳಲ್ಲಿ ನಿಮ್ಮದೇ ಪಕ್ಷದ ಮುಖಂಡರು ನಿಮ್ಮನ್ನು ಕಸದ ಬುಟ್ಟಿಗೆ ಹಾಕುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು   ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Leave a Reply

Please enter your comment!
Please enter your name here