ಲೈಂಗಿಕ ಕಿರುಕುಳದ ಆರೋಪ: ಮುರುಘಾ ಶ್ರೀ ಬಂಧನ

Spread the love

 ಲೈಂಗಿಕ ಕಿರುಕುಳದ ಆರೋಪ: ಮುರುಘಾ ಶ್ರೀ ಬಂಧನ

ಚಿತ್ರದುರ್ಗದ ಮುರುಘಾ ಮಠದ ಹಾಸ್ಟೆಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದ ಮೇಲೆ ಚಿತ್ರದುರ್ಗದ ಮುರುಘಾ ಮಠದಲ್ಲಿಯೇ ಮುರುಘಾ ಶ್ರೀ ಅವರನ್ನು ಪೋಕ್ಸೋ ಕಾಯ್ದೆಯಡಿ  ಚಿತ್ರದುರ್ಗ ಪೊಲೀಸರು ಇದೀಗ ತಾನೆ (ಗುರುವಾರ ರಾತ್ರಿ) ಬಂಧಿಸಿದ್ದಾರೆ.

ಚಿತ್ರದುರ್ಗ ಗ್ರಾಮಾಂತರ ಠಾಣೆಯ ಸಿಪಿಐ ಬಾಲಚಂದ್ರ ನಾಯ್ಕ್‌, ಮೊಳಕಾಲ್ಮೂರು ಠಾಣೆ ಸಿಪಿಐ ಸತೀಶ್ ಅವರುಗಳು ಮಠದ ಒಳಗೆ ಪ್ರವೇಶಿಸಿ, ಪ್ರಕರಣ ದಾಖಲಾಗಿ 6 ದಿನಗಳ ನಂತರ ಬಂಧನದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.

ಶ್ರೀಗಳನ್ನು ಬಂಧಿಸಿದ ಪೊಲೀಸರು ಅವರನ್ನು ಠಾಣೆಯತ್ತ ಕರೆದೊಯ್ಯಲಿದ್ದಾರೆ. ಅದಕ್ಕೂ ಮುನ್ನ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿದ್ದಾರೆ.

ಚಿತ್ರದುರ್ಗದ ಮುರುಘಾ ಮಠದ  ಮುರುಘಾ ಶ್ರೀ ವಿರುದ್ಧ ಪೋಕ್ಸೋ ಕಾಯ್ದೆಯಡಿ  ಪ್ರಕರಣ ದಾಖಲಾಗಿ, ಶ್ರೀಗಳ ವಿರುದ್ಧ ಪೊಲೀಸರು ಲುಕ್‌ಔಟ್‌ ನೋಟಿಸ್ ಜಾರಿ ಮಾಡಿದ್ದರ ಬೆನ್ನಿಗೆ ಮುರುಘಾ ಮಠದ ಲೈಂಗಿಕ ಪ್ರಕರಣಗಳ ಹಿನ್ನೆಲೆಯಲ್ಲಿ ಮುರುಘಾ ಶ್ರೀಯನ್ನು  ಗುರುವಾರ ರಾತ್ರಿ ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುರುಘಾಮಠದ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಆಗಸ್ಟ್‌ 26 ಶುಕ್ರವಾರ ಮುರುಘಾಶ್ರೀಗಳ ವಿರುದ್ಧ ಮೈಸೂರಿನ ನಜರ್‌ಬಾದ್‌ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸಂತ್ರಸ್ತ ಬಾಲಕಿಯರು ಒಡನಾಡಿ ಸಂಸ್ಥೆ ನೆರವು ಪಡೆದು ಕೇಸ್ ದಾಖಲಿಸಿದ್ದರು. ಬಳಿಕ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಕೇಸ್ ವರ್ಗಾವಣೆ ಆಗಿತ್ತು.

ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ.


Spread the love