
ಲೋಕಸಭಾ ಚುನಾವಣೆಗೆ ಗೆಲುವಿಗೆ ಕರಾವಳಿ ಜಿಲ್ಲೆಯಲ್ಲಿ ತಂತ್ರಗಾರಿಕೆ: ಸಲೀಂ ಅಹ್ಮದ್
ಮಂಗಳೂರು: ಲೋಕಸಭೆ ಚುನಾವಣೆಗೆ ಸಿದ್ಧತೆ ಹಾಗೂ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪಕ್ಷದ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಲು ಎಐಸಿಸಿ ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಒಬ್ಬ ಸಚಿವರು ಮತ್ತು ಪಕ್ಷದ ಹಿರಿಯ ಮುಖಂಡರನ್ನು ಪಕ್ಷದ ವೀಕ್ಷಕರನ್ನಾಗಿ ನೇಮಕ ಮಾಡಲಿದೆ. ಯುವ ನಿಧಿ ಯೋಜನೆ ಡಿಸೆಂಬರ್‌ನಲ್ಲಿ ಜಾರಿಗೆ ಬರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಶನಿವಾರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಅವರು ಮಾತನಾಡಿ, ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ 20 ಕ್ಕೂ ಹೆಚ್ಚು ಸ್ಥಾನ ಗೆಲ್ಲಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆಗೆ ಕನಿಷ್ಠ ಆರು ತಿಂಗಳ ಮೊದಲು ಅಭ್ಯರ್ಥಿಗಳನ್ನು ಘೋಷಿಸಲು ನಾವು ಹೈಕಮಾಂಡ್ ಗೆ ಮನವಿ ಮಾಡಿದ್ದೇವೆ. ಪ್ರತಿ ಕ್ಷೇತ್ರಕ್ಕೆ ಪಕ್ಷದ ವೀಕ್ಷಕರ ಪಟ್ಟಿಯನ್ನು ಎಐಸಿಸಿ ಶೀಘ್ರವೇ ಬಿಡುಗಡೆ ಮಾಡಲಿದೆ. ಈ ಬಾರಿ ಇಂಡಿಯಾ ಅಧಿಕಾರಕ್ಕೆ ಬರಲಿದೆ. ರಾಹುಲ್ ಗಾಂಧಿ ಅವರು ಪ್ರಧಾನಿ ಆಗಲಿದ್ದಾರೆ. ಒಂಬತ್ತೂವರೆ ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಜನರ ಖಾತೆಗಳಿಗೆ 15 ಲಕ್ಷ ರೂಪಾಯಿ ಜಮೆಯೇ ಮಾಡಲಿಲ್ಲ. ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ವಾರ್ಷಿಕ ಎರಡು ಕೋಟಿ ಉದ್ಯೋಗ ಸೃಷ್ಟಿಸಿ ಮಾಡುತ್ತೇವೆ ಎಂದಿದ್ದರು, ಆದರೆ ನಿರುದ್ಯೋಗಕ್ಕೆ ಕಾರಣ ಆಗಿದ್ದಾರೆ. ಆರು ವರ್ಷಗಳಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ಸರಕಾರ ವಿಫಲ ಆಗಿದೆ. ಎರಡೂ ಜಿಲ್ಲೆಗಳಿಗೆ ಪಕ್ಷವು ವಿಶೇಷ ಒತ್ತು ನೀಡಲಿದ್ದು, ಚುನಾವಣೆ ಗೆಲುವಿಗೆ ತಂತ್ರಗಾರಿಕೆ ಮಾಡಲಿದ್ದೇವೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಚುನಾವಣೆ ಎದುರಿಸಲು ನಮ್ಮ ಕಾರ್ಯತಂತ್ರಗಳೂ ಬದಲಾಗುತ್ತವೆ. ಪಕ್ಷವನ್ನು ಮತ್ತಷ್ಟು ಬಲಪಡಿಸಲು ಬೂತ್ ಮಟ್ಟದಲ್ಲಿಯೂ ಸಂಘಟನೆ ಮಾಡುತ್ತೇವೆ. ಜನರು ಬದಲಾವಣೆ ಬಯಸುತ್ತಿದ್ದು, ಜನರಿಗೆ ಕಾಂಗ್ರೆಸ್ ಮೇಲೆ ವಿಶ್ವಾಸ ಹೆಚ್ಚಾಗಿದೆ ಎಂದರು.
ನಾವು ಯಾವುದೇ ಅಪರೇಷನ್ ಕಾರ್ಯಾಚರಣೆಯಲ್ಲಿ ತೊಡಗಿಲ್ಲ. ಮುಂದಿನ ಐದು ವರ್ಷಗಳ ಕಾಲ ಕರ್ನಾಟಕದಲ್ಲಿ ಪ್ರಬಲ ಮತ್ತು ಸ್ಥಿರ ಸರ್ಕಾರ ನೀಡಲು ಪಕ್ಷವು 136 ಶಾಸಕರನ್ನು ಹೊಂದಿರುವ ಸ್ಪಷ್ಟ ಬಹುಮತವನ್ನು ಹೊಂದಿದೆ. ಬಿಜೆಪಿ ಮತ್ತು ಜೆಡಿಎಸ್‌ನ ಹಲವು ನಾಯಕರು ನಮ್ಮನ್ನು ಸಂಪರ್ಕಿಸಿದ್ದಾರೆ. ಪಕ್ಷ ಸೇರಲು ಅವಕಾಶ ನೀಡುವ ಕುರಿತು ಹೈಕಮಾಂಡ್ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದರು.
ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಕಾಂಗ್ರೆಸ್ ಸಿದ್ದತೆ ಮಾಡಿಕೊಂಡಿದೆ. ಬಿಜೆಪಿಯವರು ಕೇವಲ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವುದರಲ್ಲಿ ತೊಡಗಿದ್ದಾರೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ 90 ದಿನಗಳಲ್ಲಿ ಕಾಂಗ್ರೆಸ್ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು. ಕೆ. ಹರೀಶ್ ಕುಮಾರ್, ಬಿ ರಮಾನಾಥ್ ರೈ, ಜೆ. ಆರ್. ಲೋಬೊ, ಐವನ್ ಡಿಸೋಜ, ಲುಕ್ಮನ್ ಬಂಟ್ವಾಳ, ಸುದರ್ಶನ್ ಜೈನ್, ತೇಜಶ್ವಿ ರಾಜ್, ಶಾಹುಲ್ ಹಮೀದ್, ಟಿ. ಎಂ .ಶಾಹಿದ್, ಸದಾಶಿವ ಉಳ್ಳಾಲ್, ಜೋಕಿಮ್ ಡಿಸೋಜ ಇದ್ದರು.