ಲೋಕಾಯುಕ್ತ ಖೆಡ್ಡಾಗೆ ಇನ್ಸ್‌ಪೆಕ್ಟರ್ ಸಂಪಾದಿಸಿದೆಷ್ಟು?

Spread the love

ಲೋಕಾಯುಕ್ತ ಖೆಡ್ಡಾಗೆ ಇನ್ಸ್‌ಪೆಕ್ಟರ್ ಸಂಪಾದಿಸಿದೆಷ್ಟು?

ಮೈಸೂರು: ಮೂರು ದಿನಗಳ ಹಿಂದಷ್ಟೇ ಲೋಕಾಯುಕ್ತ ದಾಳಿಗೊಳಗಾದ ಕುಶಾಲನಗರ ವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಮನೆಯಲ್ಲಿ ಭೌತಿಕವಾಗಿ ನಿರೀಕ್ಷಿತ ಪ್ರಮಾಣದ ವಸ್ತು ಹಾಗೂ ಹಣ, ಆಸ್ತಿ ಲಭ್ಯವಾಗಿಲ್ಲವಾದರೂ ಅವರ ಬಳಿ ಸಧ್ಯದ ಮಟ್ಟಿಗೆ ಲಭ್ಯವಿರುವ ಆಸ್ತಿಯ ಹಿಂದಿನ ಕಹಾನಿ ಅತ್ಯಂತ ರೋಚಕತೆಯಿಂದ ಕೂಡಿದೆ.

ಮಹೇಶ್ ಅವರ ಮಾವ (ಪತ್ನಿ ಸೀಮಾ ತಂದೆ ರಾಜಶೇಖರ್) ಸರ್ಕಾರದ ದಾಖಲೆಗಳ ಪ್ರಕಾರ ಬಿಪಿಎಲ್ ಕಾರ್ಡ್ ಹೋಲ್ಡರ್ ಆಗಿರುವುದು ಒಂದೆಡೆಯಾದರೆ, ಅದೇ ವ್ಯಕ್ತಿ ಕುಶಾಲನಗರದಲ್ಲಿ ತನ್ನ ಮಗಳು ಸೀಮಾ ಅವರಿಗೆ ಒಂದರ ಪಕ್ಕ ಒಂದರಂತೆ 30-40 ಅಳತೆಯ ಮೂರು ನಿವೇಶನಗಳನ್ನು ಖರೀದಿಸಿದ್ದು, ಅವುಗಳನ್ನು ಮಗಳ ಹೆಸರಿಗೆ ದಾನ ಮಾಡಿರುವುದು ಲೋಕಾಯುಕ್ತ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಎಸಿಬಿಯಿಂದ ದಾಳಿ ನಡೆಯಲಿದೆ ಎಂಬ ಮಾಹಿತಿ ಪಡೆದಿದ್ದ ಮಹೇಶ್, ಮನೆಯಲ್ಲಿ ಯಾವುದೇ ರೀತಿಯ ಬೆಲೆ ಬಾಳುವ ಪದಾರ್ಥಗಳನ್ನು ಇಟ್ಟಿಲ್ಲದಿರುವುದು ದಾಳಿ ವೇಳೆ ಕಂಡುಬಂದರೂ, 2ರಿಂದ 3 ಕೋಟಿ ರೂ. ಬೆಲೆ ಬಾಳುವ ಮೂರಂತಸ್ತಿನ ಅದ್ದೂರಿ ಐಷಾರಾಮಿ ಮನೆ, ಮನೆಯ ಗೋಡೆಗೆ ಟೀಕ್ ಮರದಿಂದ ಅಲಂಕಾರಗೊಳಿಸಿರುವುದನ್ನು ಕಂಡು ಲೋಕಾಯುಕ್ತ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಮನೆಯ ಗೋಡೆಗೆ ಹಾಕಲಾಗಿರುವ ಟೀಕ್ ಮರದ ಅಂದಾಜು ಮೌಲ್ಯವೇ ಹತ್ತಿರತ್ತಿರ ಸುಮಾರು 80ಲಕ್ಷ ರೂ.ಗಳಿಂದ 1 ಕೋಟಿ ರೂ. ಆಗಲಿದೆ ಎಂದು ಅಂದಾಜಿಸಲಾಗಿದೆ.

ಮಾತ್ರವಲ್ಲ, ಮನೆಯಿಂದ ಬಹುತೇಕ ಪದಾರ್ಥಗಳನ್ನು ಸಾಗಿಸಿದ್ದಾರೆ ಎನ್ನಲಾಗಿದ್ದರೂ, ಲಕ್ಷಾಂತರ ರೂ. ಬೆಲೆ ಬಾಳುವ ಫ್ರಿಡ್ಜ್, ವಾಷಿಂಗ್ ಮೆಷಿನ್, ಟಿವಿ ಸೇರಿದಂತೆ ಇನ್ನಿತರೆ ಎಲೆಕ್ಟ್ರಾನಿಕ್ ಪದಾರ್ಥಗಳು, ಮಹೇಶ್, ಪತ್ನಿ ಹಾಗೂ ಮಗಳ ಹೆಸರಿನಲ್ಲಿ ವಿವಿಧ ಬ್ಯಾಂಕ್ ಖಾತೆಗಳಲ್ಲಿ 19 ಲಕ್ಷ ರೂ. ನಗದು ಸೇರಿದಂತೆ ಇನ್ನಿತರೆ ಮೂಲಗಳಲ್ಲಿ ಹಣ ತೊಡಗಿಸಿರುವುದು ಕಂಡುಬಂದಿದೆ.

ಮೊದಲಿಗೆ 1996ರಲ್ಲಿ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕೆಲಸಕ್ಕೆ ಸೇರಿದ್ದ ಮಹೇಶ್ ನಂತರ ಇನ್ ಸರ್ವೀಸ್ ಮೂಲಕ 2005ರಲ್ಲಿ ಪಿಎಸ್‌ಐ ಆಗಿ ನೇಮಕಗೊಂಡು, 17 ವರ್ಷಗಳಲ್ಲಿ ನಿರೀಕ್ಷೆಗೂ ಮೀರಿದ ಆಸ್ತಿ ಸಂಪಾದಿಸಿರುವುದು ಲೋಕಾಯುಕ್ತ ಇಲಾಖೆ ಗಮನಕ್ಕೆ ಬಂದಿದೆ.

ಮನೆ ಕಟ್ಟಲು ಬ್ಯಾಂಕೊಂದರಲ್ಲಿ ಮೊದಲಿಗೆ 30ಲಕ್ಷ ರೂ. ಸಾಲ ಪಡೆದಿದ್ದ ಮಹೇಶ್, ನಂತರ ಅದನ್ನು 50ಕ್ಕೆ ಏರಿಸಿಕೊಂಡಿದ್ದು, ತದ ನಂತರದ ಒಂದೆರಡು ವರ್ಷಗಳಲ್ಲೇ 14 ಲಕ್ಷ ರೂ. ಸಾಲ ಮರುಪಾವತಿ ಮಾಡಿರುವುದು ದಾಖಲೆಗಳಲ್ಲಿ ಉಲ್ಲೇಖವಾಗಿದೆ.

ಲೋಕಾಯುಕ್ತ ಇಲಾಖೆಯಲ್ಲಿ ದಾಖಲಾಗಿರುವ ಪ್ರಕರಣದೊಟ್ಟಿಗೆ, ಮನೆಗೆ ಬಳಸಿರುವ ಟೀಕ್ ಮರದ ಅಂದಾಜು ಮಾಡಲು ಇದೀಗ ಅರಣ್ಯ ಇಲಾಖೆಯೂ ಪ್ರಕರಣ ದಾಖಲು ಮಾಡಲು ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಹೇಳಲಾಗಿದೆ.


Spread the love