
ಲೋನ್ ಆಪ್ ನಲ್ಲಿ ಸಾಲ ಪಡೆದ ಗ್ರಾಹಕನಿಗೆ ಬ್ಲಾಕ್ ಮೇಲ್!
ಮೈಸೂರು: ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಆನ್ ಲೈನ್ ಆಪ್ ಗಳಲ್ಲಿ ಸಾಲ ಪಡೆಯುವವರು ಒಂದು ಕ್ಷಣ ಯೋಚಿಸಬೇಕಾದ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ.
ಆಪ್ ಗಳಲ್ಲಿ ಸಾಲ ನೀಡುತ್ತಾರೆಂದು ಸಾಲ ಮಾಡಿದರೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಕೆಲವರು ಗ್ರಾಹಕರಿಗೆ ಹಣವನ್ನು ನೀಡದೆ ವಂಚಿಸುವುದಲ್ಲದೆ, ಅಶ್ಲೀಲ ಫೋಟೋಗಳನ್ನು ಸೃಷ್ಟಿ ಮಾಡಿ ಬ್ಲಾಕ್ ಮೇಲ್ ಮಾಡುವ ದುರಳರೂ ಇದ್ದಾರೆ. ಇದೀಗ ಪ್ರಕರಣ ಬಯಲಾಗಿದೆ.
ಮೈಸೂರಿನ ಅತಿಥಿ ಉಪನ್ಯಾಸಕರೊಬ್ಬರು ಆಪ್ ನಲ್ಲಿ ಸಾಲ ಪಡೆದ ತಪ್ಪಿಗೆ ಕಹಿ ಘಟನೆ ಅನುಭವಿಸುಂತಾಗಿದೆ. ಸದ್ಯ ಅವರು ಸೆನ್ ಪೊಲೀಸರ ಮೊರೆ ಹೋಗಿದ್ದರಿಂದ ದುರುಳರ ಬ್ಲಾಕ್ ಮೇಲ್ ತಂತ್ರಕ್ಕೆ ತಡೆಬಿದ್ದಿದೆ. ಇಷ್ಟಕ್ಕೂ ಆಗಿದ್ದೇನು ಎಂಬುದನ್ನು ನೋಡಿದ್ದೇ ಆದರೆ ಮೈಸೂರಿನ .ಮಾನಸಗಂಗೋತ್ರಿಯಲ್ಲಿ ಅತಿಥಿ ಉಪನ್ಯಾಸಕರಾಗಿರುವ ಚಂದ್ರಗುಪ್ತ ಅವರಿಗೆ ಸಾಲ ನೀಡುವುದಾಗಿ ಆಪ್ ನವರು ಮಾಹಿತಿ ನೀಡಿದ್ದು ಅದರಂತೆ ಅವರು ಸೂಪರ್ ಲೋನ್ ಆಪ್ ನಲ್ಲಿ ಸಾಲ ಪಡೆಯಲು ಮುಂದಾಗಿದ್ದಾರೆ.
ಚಂದ್ರಗುಪ್ತ ಅವರು ಕೇವಲ ಮೂರು ಸಾವಿರ ಸಾಲ ಪಡೆಯಲು ಮುಂದಾಗಿದ್ದು, ಅದರಂತೆ ಸಾಲ ಪಡೆಯಲು ಬೇಕಾಗುವ ದಾಖಲಾತಿಗಳನ್ನೆಲ್ಲ ಆಪ್ ನವರು ಕೇಳಿದ ದಾಖಲೆಗಳನ್ನ ಕೊಟ್ಟಿದ್ದಾರೆ. ದಾಖಲೆ ಕೊಟ್ಟ ಮರುಕ್ಷಣವೇ ಮೇ 20 ರಂದು ಮೂರು ಸಾವಿರ ಬದಲಾಗಿ ಕೇವಲ 1800 ರೂ.ನ್ನು ಚಂದ್ರಗುಪ್ತ ಅವರ ಖಾತೆಗೆ ಜಮಾ ಮಾಡಿದ್ದಾರೆ. ಅಷ್ಟೇ ಅಲ್ಲದೆ ಜಮಾ ಮಾಡಿದ ಏಳು ದಿನಗಳಿಗೆ ಅವಧಿ ಮುಗಿದಿದೆ ಹಣ ಹಿಂದಿರುಗಿಸಬೇಕೆಂದು ಮೆಸೇಜ್ ಹಾಕಿದ್ದಾರೆ.
ಅದರಂತೆ ಚಂದ್ರಗುಪ್ತ ಅವರು 1800 ರೂ ಪಾವತಿಸಿದ್ದಾರೆ. ಆದರೂ ಮತ್ತೆ ಮತ್ತೆ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾರೆ. ಪಡೆದ 1800 ಸಾಲಕ್ಕೆ ಮೂರು ಸಾವಿರ ಪಾವತಿಸಿದ್ದರೂ ಮತ್ತಷ್ಟು ಹಣಕ್ಕಾಗಿ ಒತ್ತಾಯಿಸಿದ್ದಾರೆ. ಈ ವೇಳೆ ಹಣ ಕೊಡಲು ಚಂದ್ರಗುಪ್ತ ಅವರು ನಿರಾಕರಿಸಿದಾಗ ಅವರ ಅಕೌಂಟ್ ಹ್ಯಾಕ್ ಮಾಡಿ ಸಂಪೂರ್ಣ ಮಾಹಿತಿ ಕಲೆ ಹಾಕಿ ನಂತರ ಅಶ್ಲೀಲ ಫೋಟೋ ಒಂದನ್ನು ಕ್ರಿಯೇಟ್ ಮಾಡಿ ಸ್ನೇಹಿತರು ಹಾಗೂ ಸಂಬಂಧಿಸಿದವರಿಗೆ ರವಾನಿಸುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ.
ವಂಚಕರ ಕಿರಿಕಿರಿ ತಡೆಯಲಾರದ ಚಂದ್ರಗುಪ್ತ ಅವರು ಮೈಸೂರು ನಗರದ ಸೆನ್ ಠಾಣೆ ಪೊಲೀಸರ ಮೊರೆ ಹೋಗಿ ದೂರು ನೀಡಿದ್ದಾರೆ. ಸೆನ್ ಪೊಲೀಸರ ಸಲಹೆ ಪಡೆದ ನಂತರ ಆಪ್ ನವರ ಬ್ಲಾಕ್ ಮೇಲ್ ನಿಂದ ಬಚಾವ್ ಆಗಿದ್ದಾರೆ. ಇನ್ನು ಮುಂದೆ ಯಾರೇ ಆಗಲಿ ಅನಾಮಧೇಯ ಆಪ್ ಗಳಲ್ಲಿ ಸಾಲ ಪಡೆಯುವ ಮುನ್ನ ಎಚ್ಚರ ವಹಿಸುವುದು ಒಳಿತು.