ವಜ್ರದೇಹಿ ಸ್ವಾಮೀಜಿ‌ ಪೊಲೀಸರಿಗೆ ಘೋಷಿಸಿರುವ ಚಿನ್ನದ ಪದಕ ಸ್ವೀಕರಿಸಲು ಕಾನೂನಿನಲ್ಲಿ ಅವಕಾಶ ಇಲ್ಲ –  ಆಯುಕ್ತ ಎನ್‌ ಶಶಿಕುಮಾರ್

Spread the love

ವಜ್ರದೇಹಿ ಸ್ವಾಮೀಜಿ‌ ಪೊಲೀಸರಿಗೆ ಘೋಷಿಸಿರುವ ಚಿನ್ನದ ಪದಕ ಸ್ವೀಕರಿಸಲು ಕಾನೂನಿನಲ್ಲಿ ಅವಕಾಶ ಇಲ್ಲ –  ಆಯುಕ್ತ ಎನ್‌ ಶಶಿಕುಮಾರ್

ಮಂಗಳೂರು: ಕರಾವಳಿಯಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಕೂಳೂರಿನ ನಾಗಬನ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂಧಿಸಿ ಪೋಲಿಸರಿಗೆ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರು ಘೋಷಿಸಿದ್ದ ಚಿನ್ನದ ಪದಕವನ್ನು ಪಡೆಯಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಎನ್.‌ ಶಶಿಕುಮಾರ್‌ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಪ್ರಕರಣದ ಆರೋಪಿಗಳನ್ನು 24 ದಿನಗಳಲ್ಲಿ ಬಂಧಿಸಿದರೆ ಪೊಲೀಸರಿಗೆ ಚಿನ್ನದ ಪದಕ ನೀಡುವುದಾಗಿ ಸ್ವಾಮೀಜಿ ಹೇಳಿದ್ದರು. ಅವರ ಪ್ರೋತ್ಸಾಹಕ್ಕೆ ಧನ್ಯವಾದ. ಆದರೆ ಅವರ ಕೊಡುಗೆಯನ್ನು ನಾವು ಸ್ವೀಕರಿಸುವುದಿಲ್ಲ. ನಮಗೆ ಜನರ ತೆರಿಗೆ ಹಣದಿಂದ ವೇತನ ಮತ್ತು ಪೋತ್ಸಾಹಧನ ನೀಡಲಾಗುತ್ತಿದೆ. ಇಲಾಖೆಯಲ್ಲಿ ಅತ್ಯುತ್ತಮ ಕೆಲಸ ಮಾಡಿದವರಿಗೆ ನೀಡಲೆಂದೇ ಸಿಎಂ ಚಿನ್ನದ ಪದಕ, ರಾಷ್ಟ್ರಪತಿ ಪದಕಗಳಿವೆ. ಈ ಪ್ರಕರಣದಲ್ಲೂ ತನಿಖೆ, ಆರೋಪಿಗಳ ಪತ್ತೆಯಲ್ಲಿ ಅಹರ್ನಿಶಿ ದುಡಿದವರಿಗೆ ಇಲಾಖೆ ವತಿಯಿಂದ 20 ಸಾವಿರ ರೂ.ಬಹುಮಾನ ಘೋಷಿಸಲಾಗಿದೆ. ಸ್ವಾಮೀಜಿಯವರ ಬಂಗಾರದ ಪದಕ ಸ್ವೀಕರಿಸಲು ಇಲಾಖೆಯಲ್ಲಿ ಅವಕಾಶವಿಲ್ಲ. ಖಾಸಗಿ ವ್ಯಕ್ತಿಗಳು ನೀಡುವ ವೈಯಕ್ತಿಕ ಬಹುಮಾನ, ನಗದು ಬಹುಮಾನ ಸ್ವೀಕರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಕರಣ ನಡೆದಾಗ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗದ ಮುಂದೆ ತರುವುದು ಪೊಲೀಸರ ಕರ್ತವ್ಯ. ಈ ಪ್ರಕರಣದಲ್ಲಿಯೂ ನಮ್ಮ ಕರ್ತವ್ಯ ನಿರ್ವಹಿಸಿದ್ದೇವೆ. ಇದುವರೆಗೆ ಶಾಂತಿ ಕಾಪಾಡಿ ನಮಗೆ ಪ್ರೋತ್ಸಾಹ ನೀಡಿದ್ದಕ್ಕೆ ಎಲ್ಲಾ ಸಂಘಟನೆಗಳು, ಸಾರ್ವಜನಿಕರಿಗೆ ಧನ್ಯವಾದಗಳು ಎಂದು ಶಶಿಕುಮಾರ್ ತಿಳಿಸಿದರು.


Spread the love