ವರದಿ ಪ್ರಕಟಿಸದಂತೆ ಡಿವಿಎಸ್ ಕೋರ್ಟ್ ಮೊರೆ!

Spread the love

ವರದಿ ಪ್ರಕಟಿಸದಂತೆ ಡಿವಿಎಸ್ ಕೋರ್ಟ್ ಮೊರೆ!

ಬೆಂಗಳೂರು: ಪತ್ರಿಕೆ, ನ್ಯೂಸ್‌ ಚಾನಲ್ಗಳಲ್ಲಿ ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ವರದಿಗಳನ್ನು ಪ್ರಕಟಿಸದಂತೆ ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಅವರು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ನಿಂದ ನಿರ್ಬಂಧ ತಂದಿರುವುದು ಅಚ್ಚರಿ ಮೂಡಿಸಿದೆ

ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಚಾರವನ್ನು ಸದಾನಂದಗೌಡರು ಬಹಿರಂಗಗೊಳಿಸಿದ್ದು, ಹಾಗಾದರೆ ಅವರ ವಿರುದ್ಧ ವೀಡಿಯೋ ಹರಿಬಿಡುವ ಸಂಚು ಏನಾದರೂ ನಡೆದಿಯಾ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳತೊಡಗಿವೆ.

ಅವರೇ ತಿಳಿಸಿರುವಂತೆ ಕೇಂದ್ರ ಸಚಿವ ಸಂಪುಟ ಪುನಾರಚನೆಯ ಸಂದರ್ಭದಲ್ಲಿ ಕೆಲ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಸುಳ್ಳುಸುದ್ದಿ ಪ್ರಸಾರ ಮಾಡುವ ಸಾಧ್ಯತೆ ಇದೆ. ಕಿಡಿಗೇಡಿಗಳು ನಕಲಿ ಸಿಡಿ ಸೃಷ್ಟಿಸಿ ಮಾಧ್ಯಮಗಳಲ್ಲಿ ಹರಿಬಿಡುವ ಸಾಧ್ಯತೆಯೂ ಇದೆ ಎಂಬ ಕಾರಣ ನೀಡಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಪ್ರಸಾರ ನಿರ್ಬಂಧ ತರಲಾಗಿದೆ ಎಂದು ಹೇಳಿದ್ದಾರೆ.

ನ್ಯಾಯಾಲಯಕ್ಕೆ ಸಲ್ಲಿಸಿದ್ದ ತಮ್ಮ ಅರ್ಜಿಯಲ್ಲಿ ಈ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ, ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್ ಕುರಿತು ನಕಲಿ ವಿಡಿಯೋ ಮಾಡಲಾಗಿತ್ತು ಎಂಬ ಉದಾಹರಣೆಯನ್ನು ಉಲ್ಲೇಖಿಸಿದ್ದು, ತಮ್ಮ ಬಗ್ಗೆಯೂ ಇಂತಹ ವಿಡಿಯೋ ಪ್ರಸಾರ ಮಾಡುವ ಅಪಾಯವಿದೆ. ಇದರಿಂದ ನಮ್ಮ ಘನತೆಗೆ ಧಕ್ಕೆಯಾಗಲಿದೆ. ಚಾರಿತ್ರ್ಯ ವಧೆಯಾಗಲಿದೆ ಎಂದು ಅರ್ಜಿ ಸಲ್ಲಿಸಿದ್ದರು.

ಅವರ ಆ ಅರ್ಜಿಯನ್ನು ಮಾನ್ಯ ಮಾಡಿದ ಕೋರ್ಟ್, ಮಾನಹಾನಿಕರ ವರದಿ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದೆ. ಇನ್ನೊಂದೆಡೆ ಈ ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್ ಮೂಲಕ ಸ್ಪಷ್ಟ ಪಡಿಸಿರುವ ಅವರು, ಚುನಾವಣೆ, ಸಂಪುಟ ರಚನೆ ಸಂದರ್ಭದಲ್ಲಿ ವಿರೋಧಿಗಳು ಈ ಮುಂಚೆಯೂ ನನ್ನ ವೈಯಕ್ತಿಕ ತೇಜೋವಧೆಗೆ ಪ್ರಯತ್ನಿಸಿದ್ದರು. ಮಾಧ್ಯಮ ಸ್ವಾತಂತ್ರ್ಯವನ್ನು ನಾನು ಸಂಪೂರ್ಣ ಗೌರವಿಸುತ್ತೇನೆ. ಆದರೆ ವಿರೋಧಿಗಳ ಸಂಚಿಗೆ ಬಲಿಯಾಗಿ ತಪ್ಪುಮಾಹಿತಿ ಪ್ರಸರಣದಲ್ಲಿ ತೊಡಗಬಾರದೆಂಬ ಉದ್ದೇಶದಿಂದ ‌ನಿರ್ಬಂಧ ಆದೇಶ ತರಬೇಕಾಗಿ ಬಂತು. ದಯವಿಟ್ಟು ಯಾರೂ ಅನ್ಯತಾ ಭಾವಿಸಬಾರದು ಎಂದು ಮನವಿ ಮಾಡಿದ್ದಾರೆ. ಸದ್ಯಕ್ಕೆ ಈ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

 


Spread the love