
ವರುಣದಲ್ಲಿ ಬಿಜೆಪಿ ಬಾವುಟ ಹಾರಿಸಬೇಕು:ಪ್ರತಾಪ್ ಸಿಂಹ
ಮೈಸೂರು: ವರುಣಾ ಕ್ಷೇತ್ರದಲ್ಲಿ ಅಪ್ಪ-ಮಗ 15 ವರ್ಷಗಳ ಕಾಲ ಆಡಳಿತ ನಡೆಸಿದರೂ, ಆ ಕ್ಷೇತ್ರಕ್ಕೆ ವ್ಯಕ್ತಿತ್ವವೇ ಇಲ್ಲದಂತೆ ಅಬ್ಬೇಪಾರಿ ಮಾಡಿದ್ದಾರೆ. ಹಾಗಾಗಿ ಈ ಬಾರಿಯ ವಿಧಾನ ಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಸೋಲಿಸಿ, ಮನೆಗೆ ಕಳುಹಿಸುವ ಮೂಲಕ ಅಲ್ಲಿ ಬಿಜೆಪಿ ಬಾವುಟ ಹಾರಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಕರ್ನಾಟಕ ಬಿಜೆಪಿ ಡಿಜಿಟಲ್ ಮಾಧ್ಯಮ ಪ್ರಕೋಷ್ಟದಿಂದ ಆಯೋಜಿಸಲಾಗಿದ್ದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ವರುಣಾ ಕ್ಷೇತ್ರಕ್ಕೆ ಸಿದ್ದರಾಮಯ್ಯನವರ ಕೊಡುಗೆ ಏನು, ಈ ಕ್ಷೇತ್ರ ಯಾವುದೇ ವ್ಯಕ್ತಿತ್ವ ಇಲ್ಲದ ಅಬ್ಬೇಪಾರಿಯಾಗಿದೆ. ಹಾಗಾಗಿ ಇಲ್ಲಿ ಸಿದ್ದರಾಮಯ್ಯನವರನ್ನು ಸೋಲಿಸಿ, ಮನೆಗೆ ಕಳುಹಿಸಿ, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಈ ಕ್ಷೇತ್ರವನ್ನು ತಾಲೂಕು ಕೇಂದ್ರ ಮಾಡಿ, ಅಭಿವೃದ್ಧಿಯ ರೂಪರೇಷೆ ಮಾಡುತ್ತೇವೆ ಎಂದು ಹೇಳಿದರು.
ವರುಣಾಗೂ ಸೋಮಣ್ಣಗೂ ಏನು ಸಂಬಂಧ ಎಂದು ಸಿದ್ದರಾಮಯ್ಯ ಪ್ರಶ್ನಿಸುತ್ತಿದ್ದಾರೆ. ಬಾದಾಮಿಗೂ ಸಿದ್ದರಾಮಯ್ಯರಿಗೂ ಏನು ಸಂಬಂಧ, ಕೇರಳದ ವೈನಾಡಿಗೂ ರಾಹುಲ್ ಗಾಂಧಿಗೂ ಏನು ಸಂಬಂಧ, ಇಂದಿರಾಗಾಂಧಿಗೂ ಚಿಕ್ಕಮಗಳೂರಿಗೂ ಏನು ಸಂಬಂಧ, ಬಳ್ಳಾರಿಗೂ ಸೋನಿಯಾಗಾಂಧಿಗೂ ಏನು ಸಂಬಂಧ ಎಂದು ತಿರುಗೇಟು ನೀಡಿದರು. ಕಾಂಗ್ರೆಸ್ ಹಾಗೂ ಜೆಡಿಎಸ್‌ನವರು ಜಾತಿವಾದಿಗಳು. ಅವರನ್ನು ಈ ಚುನಾವಣೆಯಲ್ಲಿ ಮಟ್ಟ ಹಾಕಿ, ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.
ತತ್ವ ಸಿದ್ಧಾಂತಗಳನ್ನು ಜನರಿಗೆ ಬೋಧನೆ ಮಾಡುತ್ತಾ, ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿರುವ ಸಿದ್ದರಾಮಯ್ಯನವರಿಗೆ ಈ ರಾಜ್ಯದ ಅಭಿವೃದ್ದಿಯ ಬಗ್ಗೆ ಯಾವುದೇ ದೂರದೃಷ್ಠಿಯಿಲ್ಲ. ಅಭಿವೃದ್ಧಿಯ ಯಾವುದೇ ಆಲೋಚನೆಗಳಿಲ್ಲ. ವಿಷನ್ ಇಲ್ಲ. ಹಾಗಾಗಿಯೇ ತಿಂಗಳಿಗೆ 10 ಕೆ.ಜಿ ಅಕ್ಕಿ ಕೊಡ್ತೀವಿ, ಮಹಿಳೆಯರಿಗೆ 2 ಸಾವಿರ ರೂ ನೀಡ್ತೀವಿ, 200 ಯೂನಿಟ್ ವಿದ್ಯುತ್‌ನ್ನು ಪುಕ್ಕಟ್ಟೆಯಾಗಿ ನೀಡ್ತೀವಿ ಎಂದು ಹೇಳುತ್ತಿದ್ದಾರೆ. ಇದಕ್ಕೆಲ್ಲಾ ಅವರ ಮನೆಯಿಂದ ಇಲ್ಲವೇ ಕಾಂಗ್ರೆಸ್ ನಾಯಕರ ಮನೆಗಳಿಂದ ಹಣವನ್ನು ತಂದು ಜನರಿಗೆ ನೀಡುವುದಿಲ್ಲ. ಸಿದ್ದರಾಮಯ್ಯನವರೇ ಅವರ ಊರಾದ ಸಿದ್ದರಾಮಯ್ಯನಹುಂಡಿಯಲ್ಲಿರುವ ಗದ್ದೆಯಲ್ಲಿ ಅಕ್ಕಿಯನ್ನು ಬೆಳೆದು ತಂದು ಜನರಿಗೆ ಉಚಿತವಾಗಿ ನೀಡುವುದಿಲ್ಲ ಎಂದರು.
ಆಮ್ ಆದ್ಮಿ ಪಕ್ಷದವರು ಅಧಿಕಾರಕ್ಕೆ ಬರಲೆಂದು ಕಾಂಗ್ರೆಸ್‌ನವರ ರೀತಿ ಉಚಿತ ಯೋಜನೆಗಳನ್ನು ಘೋಷಣೆ ಮಾಡಿದರು. ಆದರೆ ಅದನ್ನು ಜಾರಿಗೊಳಿಸಲು ಹೋದಾಗ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಆಡಳಿತವಿರುವ ರಾಜ್ಯಗಳಲ್ಲಿಯೂ ಕಾಂಗ್ರೆಸ್ ಪಕ್ಷದವರು ಜನರಿಗೆ ಪುಕ್ಕಟ್ಟೆ ಯೋಜನೆಗಳನ್ನು ಘೋಷಿಸಿ, ಜನರಿಂದ ಮತ ಪಡೆದು ಅಧಿಕಾರಕ್ಕೆ ಬಂದರು. ಆದರೆ ನೀಡಿದ್ದ ಯಾವುದೇ ಯೋಜನೆಗಳನ್ನು ಜಾರಿಗೊಳಿಸದೆ ವಂಚನೆ ಮಾಡಿದ್ದಾರೆ. ನಮ್ಮ ರಾಜ್ಯದಲ್ಲೂ ಕೂಡ ಅಧಿಕಾರಕ್ಕೆ ಬರಲೆಂದು ಪುಕ್ಕಟ್ಟೆ ಯೋಜನೆಗಳನ್ನು ಜಾರಿಗೆ ತರುವ ಭರವಸೆಯನ್ನು ನೀಡುತ್ತಿದ್ದಾರೆ. ಇವರ ಮಾತುಗಳನ್ನು ರಾಜ್ಯದ ಜನರು ನಂಬಬಾರದು. ಒಂದು ವೇಳೆ ಕಾಂಗ್ರೆಸ್‌ನವರು ಪುಕ್ಕಟ್ಟೆ ಯೋಜನೆಗಳನ್ನು ಜಾರಿಗೊಳಿಸಿದರೆ, ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಲಿದೆ. ಶ್ರೀಲಂಕಾ, ಪಾಕಿಸ್ತಾನದ ದಿವಾಳಿತನ ಪರಿಸ್ಥಿತಿಯನ್ನು ಕಾಂಗ್ರೆಸ್‌ನವರು ರಾಜ್ಯಕ್ಕೆ ತಂದಿಡುತ್ತಾರೆ ಎಂದು ಎಚ್ಚರಿಸಿದರು.
ಸಮ್ಮೇಳನದಲ್ಲಿ ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಡಿಜಿಟಲ್ ಮಾಧ್ಯಮ ಪ್ರಕೋಷ್ಠದ ಸಂಚಾಲಕ ವಿಕಾಸ್ ಪುತ್ತೂರು, ಮಂಡ್ಯ ಸಂಚಾಲಕ ನಂದೀಶ್, ಮೈಸೂರು ಜಿಲ್ಲಾ ಸಂಚಾಲಕ ವಿನೋಭಾ, ಗ್ರಾಮಾಂತರ ಸಂಚಾಲಕ ಶರತ್ ಪುಟ್ಟ ಬುದ್ದಿ, ವಿಧಾನಪರಿಷತ್ ಸದಸ್ಯ ತುಳುಸಿ ಮುನಿರಾಜೇಗೌಡ, ಮೈಸೂರು ನಗರ ವಕ್ತಾರ ಡಾ.ಕೆ.ವಸಂತ್‌ಕುಮಾರ್, ಮೈಸೂರು ವಿಭಾಗ ಮಾಧ್ಯಮ ಸಂಯೋಜಕ ನಾಗೇಶ್, ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಮಂಗಳ ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.