ವರುಣಾ, ಕೋಲಾರದಲ್ಲಿ ಚುನಾವಣೆಗೆ ಸ್ಪರ್ಧೆ: ಸಿದ್ದರಾಮಯ್ಯ

Spread the love

ವರುಣಾ, ಕೋಲಾರದಲ್ಲಿ ಚುನಾವಣೆಗೆ ಸ್ಪರ್ಧೆ: ಸಿದ್ದರಾಮಯ್ಯ

  • ವರುಣದೊಂದಿಗೆ ಕೋಲಾರದಲ್ಲೂ ಸ್ಪರ್ಧೆ, ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತವೆ: ಸಿದ್ದರಾಮಯ್ಯ

ಮೈಸೂರು: ನನ್ನ ಹುಟ್ಟೂರು ವರುಣಾ ಸೇರಿದಂತೆ ಕೋಲಾರದಲ್ಲಿಯೂ ಸ್ಪರ್ಧಿಸುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಎಚ್.ಡಿ.ಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ನಾನು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಅಲ್ಲಿನ ಜನರಿಂದ ಹೆಚ್ಚು ಒತ್ತಡ ಬರುತ್ತಿದೆ. ಆದರೆ ಈ ಬಾರಿ ನನ್ನ ಹುಟ್ಟೂರಾದ ವರುಣ ಸೇರಿದಂತೆ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದರು.

ವರುಣಾ ಕ್ಷೇತ್ರ ಸಿದ್ದರಾಮಯ್ಯಗೆ ಲಕ್ಕಿ ಕ್ಷೇತ್ರ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ವರುಣ ಕ್ಷೇತ್ರದಿಂದ ಗೆದ್ದಾಗಲೇ ನಾನು ಸಿಎಂ ಆಗಿದ್ದು. ಯಾವುದೇ ಒಂದು ಕ್ಷೇತ್ರ ಲಕ್ಕಿ ಎಂದು ಇಲ್ಲ. ವರುಣ ನನ್ನ ಹುಟ್ಟೂರಾಗಿದ್ದು, ವರುಣ ಹೋಬಳಿಯಾದ ಕಾರಣಕ್ಕೆ ವರುಣ ಕ್ಷೇತ್ರ ಅಂಥಾ ಕರೆಯುತ್ತಿದ್ದಾರೆ ಎಂದರು.

ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮ್ಯಾಚ್ ಫಿಕ್ಸ್ ಮಾಡಿಕೊಂಡಿದ್ದವು. ಈಗಲೂ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಅಚ್ಚರಿ ಇಲ್ಲ ಎಂದು ಹೇಳಿದರು.

ಹೈಕಮಾಂಡ್ ಜೊತೆ ಮಾತನಾಡಿದ್ದೇನೆ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ನಮ್ಮ ಹೈಕಮಾಂಡ್ ಜತೆಗೆ ಯಾರೂ ಮಾತನಾಡಿಲ್ಲ. ಈ ಬಾರಿ ನಾವು ಯಾರ ಜೊತೆಯೂ ಮಾತುಕತೆ ಮಾಡಲ್ಲ. ಕಾಂಗ್ರೆಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.

ಮೀಸಲಾತಿಗೆ ಕಾಂಗ್ರೆಸ್ ವಿರೋಧ ಇರಲಿಲ್ಲ. ಈ ಮೊದಲೇ ಒಳಮೀಸಲಾತಿಗೆ ಕಾಂಗ್ರೆಸ್ ಒಲವು ತೋರಿಸಿತ್ತು. ಬಿಜೆಪಿ ಮೂರೂವರೆ ವರ್ಷದವರೆಗೆ ಸುಮ್ಮನಿದ್ದು, ಈಗ ಘೋಷಣೆ ಮಾಡಿದೆ. ಆದರೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ನಿರ್ಧಾರ ಮಾಡಬೇಕಿತ್ತು ಎಂದರು.


Spread the love