ವಸ್ತ್ರಧಾರಣೆಯ ಆಧಾರದಲ್ಲಿ ಶಿಕ್ಷಣದ ಮೂಲಭೂತ ಹಕ್ಕಿನಿಂದ ವಂಚಿತಗೊಳಿಸುವುದು ಆಘಾತಕಾರಿ ಮತ್ತು ಸ್ವೀಕಾರಾರ್ಹವಲ್ಲ – ಎಸ್.ಐ.ಓ

Spread the love

ವಸ್ತ್ರಧಾರಣೆಯ ಆಧಾರದಲ್ಲಿ ಶಿಕ್ಷಣದ ಮೂಲಭೂತ ಹಕ್ಕಿನಿಂದ ವಂಚಿತಗೊಳಿಸುವುದು ಆಘಾತಕಾರಿ ಮತ್ತು ಸ್ವೀಕಾರಾರ್ಹವಲ್ಲ – ಎಸ್.ಐ.ಓ  

ಉಡುಪಿ: ಶಿಕ್ಷಣವು ಮನುಷ್ಯನ ಮೂಲಭೂತ ಹಕ್ಕು. ವಸ್ತ್ರಧಾರಣೆಯ ಆಧಾರದಲ್ಲಿ ಈ ಮೂಲಭೂತ ಹಕ್ಕಿನಿಂದ ವಂಚಿತಗೊಳಿಸುವುದು ಆಘಾತಕಾರಿ ಮತ್ತು ಸ್ವೀಕಾರಾರ್ಹವಲ್ಲ ಎಂದು ಎಸ್.ಐ.ಓ ಕರ್ನಾಟಕ ಹೇಳಿದೆ

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ರಾಜ್ಯ ಕಾರ್ಯದರ್ಶಿ ಮೊಹಮ್ಮದ್‌ ನಾಸೀರ್‌, ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಕಾಲೇಜಿಗೆ ಪ್ರವೇಶಿಸದಂತೆ ಕಾಲೇಜು ಪ್ರಾಂಶುಪಾಲರು ಗೇಟ್‌ಗಳನ್ನು ಮುಚ್ಚಿದ ಘಟನೆ ಕುಂದಾಪುರದಲ್ಲಿ ನಡೆದಿದ್ದು, ಇದು ಅತ್ಯಂತ ಕಳವಳಕಾರಿಯಾಗಿದೆ. ಈ ರೀತಿಯ ಹಠಾತ್ ಮತ್ತು ಅನಿಯಂತ್ರಿತ ಕ್ರಮಗಳು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಈ ವಿಚಾರಕ್ಕೆ ರಾಜಕೀಯ ಬಣ್ಣ ನೀಡುವ ಪ್ರಯತ್ನ ಖಂಡನೀಯ. ಕಾಲೇಜು ಅಧಿಕಾರಿಗಳು ಯಾವುದೇ ಗುಂಪಿನ ಒತ್ತಡದಲ್ಲಿ ಕಾರ್ಯನಿರ್ವಹಿಸಬಾರದು ಮತ್ತು ನಿಷ್ಪಕ್ಷವಾಗಿ ಕಾರ್ಯನಿರ್ವಹಿಸಬೇಕು. ಅದೇ ಸಮಯ ವಿದ್ಯಾರ್ಥಿಗಳ ಸಾಂವಿಧಾನಿಕ ಹಕ್ಕುಗಳನ್ನು ಸಂರಕ್ಷಿಸುವ ಜವಾಬ್ದಾರಿ ಅವರ ಮೇಲಿದೆ. ಕೇವಲ ಹಿಜಾಬ್ ಧರಿಸುವುದಕ್ಕೆ ಯಾರೂ ಅಸಹನೆ ವ್ಯಕ್ತ ಪಡಿಸಬಾರದು. ಅದು ವ್ಯಕ್ತಿಯೋರ್ವರ ವೈಯುಕ್ತಿಕ ಹಕ್ಕಾಗಿ ಉಳಿಯಬೇಕು.

ಶಿಕ್ಷಣವು ಮೂಲಭೂತ ಹಕ್ಕಾಗಿದೆ ಮತ್ತು ಆ ಬಗ್ಗೆ ನಿರ್ಬಂಧ ವಿಧಿಸಕೂಡದು. ತರಗತಿ ಕೊಠಡಿಗಳು ಕೇವಲ ಪಠ್ಯಕ್ರಮದಲ್ಲಿ ಸೂಚಿಸಲಾದ ವಿಷಯಗಳ ಕಲಿಕೆಗೆ ಮಾತ್ರ ಸೀಮಿತವಲ್ಲ ಬದಲಾಗಿ ಸಂವಹನದ ಮಾಡುವ ಸ್ಥಳವಾಗಿದೆ. ಪರಸ್ಪರ ಗೌರವದ ಆಧಾರದ ಮೇಲೆ ಒಬ್ಬರನೊಬ್ಬರು ಅರ್ಥಮಾಡಿಕೊಳ್ಳುವ ಮೂಲಕ ಪರಸ್ಪರ ಸಂಬಂಧಗಳನ್ನು ಅಭಿವೃದ್ಧಿಪಡಿಸುವ ಸ್ಥಳವಾಗಿದೆ. ವಿವಿಧ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳ ನಡುವೆ ಆರೋಗ್ಯಕರ ಚರ್ಚೆಯ ಮೂಲಕ ಪರಸ್ಪರ ಗೌರವವನ್ನು ಬೆಳೆಸುವುದಕ್ಕೆ ವಾತಾವರಣವನ್ನು ಒದಗಿಸಿ ಕೊಡುವ ಜವಾಬ್ದಾರಿ ಕಾಲೇಜುಗಳದ್ದು. ಸಂಕುಚಿತ, ಪಂಥೀಯ ಅಜೆಂಡಾ ಮತ್ತು ಪಕ್ಷಪಾತವು ವಸ್ತುನಿಷ್ಠ ಶಿಕ್ಷಣವನ್ನು ನಿಗ್ರಹಿಸಬಾರದು.

ನಾವು ನಿರ್ಮಿಸಲು ಬಯಸುವ ಸಮಾಜದಲ್ಲಿ ಶಿಕ್ಷಣದ ಪಾತ್ರವು ಅವಿಭಾಜ್ಯವಾಗಿದೆ. ವೈವಿಧ್ಯಮಯ ಮತ್ತು ಬಹುತ್ವದ ಸಮಾಜಕ್ಕೆ ಮುಕ್ತ ಮನಸ್ಸಿನ ಮತ್ತು ಸಹನಶೀಲ ವ್ಯಕ್ತಿಗಳ ಅಗತ್ಯವಿದೆ. ತಾರತಮ್ಯದ ಅಭ್ಯಾಸಗಳು ಯಾವುದೇ ರೀತಿಯಲ್ಲಿ ಶಿಕ್ಷಣ ವ್ಯವಸ್ಥೆಯ ಭಾಗವಾಗಬಾರದು. ಏಕರೂಪತೆಯನ್ನು ಹೇರಲು ಸಮವಸ್ತ್ರ ಅಥವಾ ಡ್ರೆಸ್ ಕೋಡ್ ಅನ್ನು ಬಳಸಬಾರದು. ಅಲ್ಲದೆ, ಸಮವಸ್ತ್ರ/ಡ್ರೆಸ್ ಕೋಡ್ ಯಾರಿಗೂ ತಾರತಮ್ಯ ಮಾಡಬಾರದು ಮತ್ತು ಅದನ್ನು ಧರಿಸಬೇಕಾದವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವಷ್ಟು ಕಠಿಣವಾದ ಉಡುಪಾಗಿರಬಾರದು.

ಕೂಡಲೇ ಆ ವಿದ್ಯಾರ್ಥಿನಿಯರನ್ನು ತರಗತಿಗೆ ಅನುಮತಿಸುವಂತೆ ಎಸ್.ಐ ಓ ಕರ್ನಾಟಕವು ಕಾಲೇಜಿನ ಆಡಳಿತ ಮಂಡಳಿಗೆ ಆಗ್ರಹಿಸುತ್ತದೆ. ಅವರು ಕಲಿಕೆಯನ್ನು ಮುಂದುವರಿಸಲಿ ಮತ್ತು ಅವರು ಏನು ಧರಿಸುತ್ತಾರೆ ಎಂಬುದನ್ನು ಸ್ವತಃ ಅವರೇ ನಿರ್ಧರಿಸಲಿ. ಸಂಬಂಧಪಟ್ಟ ಅಧಿಕಾರಿಗಳು ವ್ಯಕ್ತಿಗಳ ಸಾಂವಿಧಾನಿಕ ಹಕ್ಕುಗಳನ್ನು ಗೌರವಿಸುವುದು ಮತ್ತು ಪ್ರಸ್ತಾವಿತ ಸಮವಸ್ತ್ರ ಮಾರ್ಗಸೂಚಿಯ ಏಕರೂಪತೆಯನ್ನು ಜಾರಿಗೊಳಿಸುವ ಅಥವಾ ಸಂವಿಧಾನ ಖಾತರಿಪಡಿಸಿರುವ ಹಕ್ಕುಗಳನ್ನು ಉಲ್ಲಂಘಿಸುವ ಕಾರ್ಯ ಮಾಡುವುದಿಲ್ಲ ಎಂದು SIO ಕರ್ನಾಟಕವು ಇಲಾಖೆಯಿಂದ ನಿರೀಕ್ಷಿಸುತ್ತದೆ. ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಿ ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲು ಎಸ್ ಐ ಓ ಕರ್ನಾಟಕವು ಪ್ರಯತ್ನಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love