ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ₹991ಕ್ಕೆ ಏರಿಕೆ: ಬಿಜೆಪಿ ವಿರುದ್ಧ ಐವನ್ ಡಿಸೋಜಾ ತೀವ್ರ ಖಂಡನೆ
ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ₹991ಕ್ಕೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ ತೀವ್ರವಾಗಿ ಖಂಡಿಸಿದ್ದಾರೆ.
ಚುನಾವಣೆಗಳು ಮುಗಿದ ತಕ್ಷಣ ಗ್ಯಾಸ್ ಸಿಲಿಂಡರ್ ದರ ಏರಿಕೆ ಮಾಡಿರುವುದು ಬಿಜೆಪಿ ಪಕ್ಷದ ನಿಜಸ್ವರೂಪವನ್ನು ಬಯಲಿಗೆಳೆದಿದೆ ಎಂದು ಅವರು ಆರೋಪಿಸಿದರು. ಚುನಾವಣೆ ಸಂದರ್ಭದಲ್ಲಿ ಜನರ ಮತಗಳನ್ನು ಪಡೆಯಲು ಯಾವುದೇ ದರ ಏರಿಕೆ ಮಾಡದೆ, ಇದೀಗ ಮತ ಪಡೆದುಕೊಂಡ ನಂತರ ಜನರ ಮೇಲೆ ಬೆಲೆಭಾರ ಹಾಕಲಾಗುತ್ತಿದೆ ಎಂದು ಟೀಕಿಸಿದರು.
ಇಂದು ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ದಿನವೇ ಕಾರ್ಮಿಕ ವರ್ಗದ ಮೇಲೆ ಹೊರೆ ಹಾಕುವಂತಹ ನಿರ್ಧಾರ ಕೈಗೊಂಡಿರುವುದು ಅತ್ಯಂತ ಖಂಡನೀಯ. ಈಗಾಗಲೇ ಹೆಚ್ಚಿದ ವೆಚ್ಚದಿಂದ ಅನೇಕ ಹೋಟೆಲ್ಗಳು ಹಾಗೂ ಸಣ್ಣ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿವೆ. ಇಂತಹ ಸಂದರ್ಭದಲ್ಲಿ ಮತ್ತೆ ಗ್ಯಾಸ್ ಸಿಲಿಂಡರ್ ದರ ಏರಿಕೆ ಮಾಡಿರುವುದು ಜನವಿರೋಧಿ ನೀತಿಯ ಸ್ಪಷ್ಟ ಉದಾಹರಣೆಯಾಗಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರದ ನಿಲುವು ಜನಪರವಾಗಿಲ್ಲ. ಮಧ್ಯಮ ವರ್ಗ ಹಾಗೂ ಕೆಳವರ್ಗದ ಜನರ ಹಿತಾಸಕ್ತಿಗೆ ವಿರುದ್ಧವಾಗಿ ಸರ್ಕಾರ ನಿರಂತರವಾಗಿ ನಡೆದುಕೊಳ್ಳುತ್ತಿದೆ. ಜನಸಾಮಾನ್ಯರಿಗೆ ನೆರವಾಗುವ ಯಾವುದೇ ತೀರ್ಮಾನಗಳನ್ನು ಬಿಜೆಪಿ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಇತ್ತೀಚಿನ ಅವಧಿಯಲ್ಲಿ ದೇಶದ ಆರ್ಥಿಕ ಸ್ಥಿತಿ ಹದಗೆಡಲು ಕೇಂದ್ರ ಸರ್ಕಾರದ ತಪ್ಪು ನೀತಿಗಳೇ ಕಾರಣವಾಗಿವೆ. ಮುಂದಿನ ದಿನಗಳಲ್ಲಿ ಗೃಹಬಳಕೆಯ ಗ್ಯಾಸ್, ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನೂ ಏರಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ದರ ಏರಿಕೆಯಿಂದ ಆಟೋ ಚಾಲಕರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಹಾಗೂ ಹೋಟೆಲ್ ಉದ್ಯಮಿಗಳು ತೀವ್ರ ಸಂಕಷ್ಟ ಅನುಭವಿಸಲಿದ್ದಾರೆ. ದಿನನಿತ್ಯದ ಜೀವನ ಸಾಗಿಸುವುದು ಕಷ್ಟಕರವಾಗಲಿದೆ ಎಂದು ಹೇಳಿದರು.
ಮಹಿಳಾ ಮಸೂದೆ ಸೇರಿದಂತೆ ಹಲವು ವಿಚಾರಗಳಲ್ಲಿ ಬಿಜೆಪಿ ಜನರಿಗೆ ಭರವಸೆ ನೀಡಿ ನಂತರ ಅದನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ. ಸರ್ಕಾರದ ಕಾರ್ಯಕ್ರಮಗಳು ಜನಪರವಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದರು.
ಈ ಗ್ಯಾಸ್ ದರ ಏರಿಕೆ ಕುರಿತು ಬಿಜೆಪಿ ನಾಯಕರು ಕೂಡಲೇ ಶ್ವೇತಪತ್ರ ಹೊರಡಿಸಿ ಜನರಿಗೆ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಐವಾನ್ ಡಿಸೋಜಾ ಎಚ್ಚರಿಸಿದರು.
