ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಐದನೇ ರ‍್ಯಾಂಕ್‌ ಪಡೆದ ಹೆಮ್ಮಾಡಿಯ ನೇಹಾ ಗೆ ಸಿಎ ಆಗುವ ಬಯಕೆ

Spread the love

ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಐದನೇ ರ‍್ಯಾಂಕ್‌ ಪಡೆದ ಹೆಮ್ಮಾಡಿಯ ನೇಹಾ ಗೆ ಸಿಎ ಆಗುವ ಬಯಕೆ

ಕುಂದಾಪುರ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ವಾಣಿಜ್ಯ ವಿಭಾಗದಲ್ಲಿ ಹೆಮ್ಮಾಡಿಯ ನೇಹಾ ಎಸ್ ರಾವ್ 600 ರಲ್ಲಿ 593 ಅಂಕ ಪಡೆದು ರಾಜ್ಯಕ್ಕೆ ಐದನೇ ಸ್ಥಾನ ಗಳಿಸಿದ್ದಾರೆ.

600 ರಲ್ಲಿ 593 ಅಂಕಗಳನ್ನು ಪಡೆದುಕೊಂಡಿರುವ ನೇಹಾ, ಸಂಸ್ಕೃತ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತೃದಲ್ಲಿ 100 ಅಂಕ, ಬೇಸಿಕ್ ಮ್ಯಾತ್ಸ್, ಅರ್ಥಶಾಸ್ತೃದಲ್ಲಿ 99 ಅಂಕ ಹಾಗೂ ಇಂಗ್ಲೀಷ್ ನಲ್ಲಿ 95 ಅಂಕಗಳನ್ನು ಪಡೆದುಕೊಳ್ಳಲುವ ಮೂಲಕ ರಾಜ್ಯಕ್ಕೆ ಐದನೇ, ಉಡುಪಿ ಜಿಲ್ಲೆಗೆ ದ್ವಿತೀಯ ಹಾಗೂ ತಾಲೂಕಿಗೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.

ಹೆಮ್ಮಾಡಿಯ ರಥಬೀದಿ ನಿವಾಸಿ, ಉದ್ಯಮಿ ಶಿವಾನಂದ ಯು ರಾವ್ ಹಾಗೂ ಕವಿತಾ ಶಿವಾನಂದ ದಂಪತಿಗಳ ಏಕೈಕ ಪುತ್ರಿಯಾಗಿರುವ ನೇಹಾ ಎಸ್ ರಾವ್ ಅವರು ಕುಂದಾಪುರದ ವೆಂಕಟರಮಣ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ.

ದಿನನಿತ್ಯದ ಪಾಠ-ಪ್ರವಚನಗಳನ್ನು ಅದೇ ದಿನ ಓದಿ ಮುಗಿಸುತ್ತಿದ್ದ ನೇಹಾ ಪರೀಕ್ಷಾ ಸಮಯದಲ್ಲಿ ರಾತ್ರಿ 1 ಗಂಟೆಯವರೆಗೂ ಓದುವ ಹವ್ಯಾಸ ಬೆಳೆಸಿಕೊಂಡಿದ್ದಾರೆ.

ನೇಹಾ ಸಾಧನೆಗೆ ಆಕೆಯ ತಂದೆ-ತಾಯಿ, ಮನೆಯವರು ಮತ್ತು ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು ಸಹಕಾರ ನೀಡಿದ್ದಾರೆ. ಓದಿನ ಜೊತೆಗೆ ಸಾಂಸ್ಕೃತಿಕ ಕ್ಷೇತ್ರದಲ್ಲೂ ಆಸಕ್ತಿ ಬೆಳೆಸಿಕೊಂಡಿರುವ ನೇಹಾ ಅತ್ಯತ್ತಮ ನೃತ್ಯಗಾರ್ತಿಯಾಗಿ ಗಮನ ಸೆಳೆದಿದ್ದಾರೆ.

ಸಿಎ ಆಗುವ ಬಯಕೆ:
ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲೇ ಐದನೇ ರ್ಯಾಂಕ್ ಪಡೆದಿರುವ ನೇಹಾ ಸಿಎ ಆಗುವ ಬಯಕೆ ವ್ಯಕ್ತಪಡಿಸಿದ್ದಾಳೆ. ಸಿಎ ಕನಸು ಕಂಡಿರುವ ನೇಹಾ ಅದಕ್ಕಾಗಿಯೇ ಈಗಾಗಲೇ ಮಂಗಳೂರಿನಲ್ಲಿ ತಯಾರಿ ನಡೆಸಿಕೊಳ್ಳುತ್ತಿದ್ದಾರೆ.

ಪರೀಕ್ಷೆಯನ್ನು ಚೆನ್ನಾಗಿ ಎದುರಿಸಿದ್ದು ರಾಜ್ಯದಲ್ಲಿ ಸಾಧನೆಗೈಯ್ಯುವ ನಿರೀಕ್ಷೆ ಮೊದಲೇ ಇತ್ತು. ಆದರೆ ತಾಲೂಕಿಗೆ ಪ್ರಥಮ ಬರುವ ನಿರೀಕ್ಷೆ ಇರಲಿಲ್ಲ. ನನ್ನ ಸಾಧನೆಗೆ ಬೆಂಬಲವಾಗಿ ನಿಂತ ಸರ್ವರಿಗೂ ಧನ್ಯವಾದಗಳು ಎಂದು ನೇಹಾ ಎಸ್ ರಾವ್ ಪ್ರತಿಕ್ರಿಯಿಸಿದ್ದಾರೆ

ರಾಜ್ಯದಲ್ಲೇ ಐದನೇ ರ್ಯಾಂಕ್ ಪಡೆದ ಮಗಳ ಸಾಧನೆ ಹೆಮ್ಮೆ ಅನಿಸುತ್ತಿದೆ. ಓದಿನಲ್ಲಿ ಆಕೆ ತೋರುತ್ತಿದ್ದ ಆಸಕ್ತಿ ಇವೆಲ್ಲವನ್ನೂ ಗಮನಿಸಿ ಆಕೆ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡುತ್ತಾಳೆ ಎನ್ನುವ ನಿರೀಕ್ಷೆ ಇತ್ತು ಎಂದು ನೇಹಾ ತಂದೆ ಶಿವಾನಂದ ರಾವ್ ಪ್ರತಿಕ್ರಿಯಿಸಿದ್ದಾರೆ.


Spread the love