ವಾರ್ಡ್ ಸಮಿತಿಯನ್ನು ಬಲಪಡಿಸಲು ಮಂಗಳೂರಿನ ನಾಗರಿಕರಿಂದ ನಿರ್ಧಾರ

Spread the love

ಮಂಗಳೂರು: ವಾರ್ಡ್ ಸಮಿತಿಯನ್ನು ಬಲಪಡಿಸಲು ಮಂಗಳೂರಿನ ನಾಗರಿಕರಿಂದ ನಿರ್ಧಾರ
 

ಮಂಗಳೂರು: ಮಂಗಳೂರಿನಲ್ಲಿ ಕಳೆದ ಐದು ತಿಂಗಳಿಂದ ಸಕ್ರಿಯವಾಗಿ ವಾರ್ಡ್ ಸಮಿತಿ ಸಭೆಗಳು ನಡೆಯುತಲಿದ್ದು, ಮುಂದಿನ ದಿನಗಳಲ್ಲಿ ವಾರ್ಡ್ ಸಮಿತಿಯನ್ನು ಪರಿಣಾಮಕಾರಿಯಾಗಿಸುವ ಕುರಿತು ಕೂಲಂಕುಷವಾಗಿ ಚರ್ಚೆ ಮಾಡಲು ಮಂಗಳೂರು ವಾರ್ಡ್ ಸಮಿತಿ ಬಳಗದ ನಾಗರಿಕರು ಭಾನುವಾರ   ನಗರದ ಬಾಲ ಭವನ‌ ಕದ್ರಿಯಲ್ಲಿ ನಡೆದ ವಾರ್ಡ್ ಸಮಿತಿ ಸಮಾಲೋಚನಾ ಸಭೆಯಲ್ಲಿ ತಮ್ಮ ಒಳನೋಟದ ಅನುಭವಗಳನ್ನು ಹಂಚಿಕೊಂಡರು.

ಈ ಸಭೆಯ ಮುಖ್ಯ ಉದ್ದೇಶ ತಮ್ಮ ನೆರೆಹೊರೆಯ ಸ್ಥಳೀಯ ಸಮಸ್ಯೆಗಳನ್ನು ಸುಧಾರಿಸಲು ವಾರ್ಡ್ ಸಮಿತಿಗಳ ವ್ಯವಸ್ಥೆಯನ್ನು ಬಲಪಡಿಸುವ ಮಾರ್ಗಗಳನ್ನು ಹುಡುಕುವುದು ಹಾಗೂ ಆಡಳಿತ ವ್ಯವಸ್ಥೆಯಲ್ಲಿ ನಾಗರಿಕರು ಸೌಹಾರ್ದಯುತವಾಗಿ ಪಾಲ್ಗೊಳ್ಳುವುದರಿಂದ ಸುಲಭವಾಗಿ ಸಮಸ್ಯೆಗಳು ಹೇಗೆ ಬಗೆಹರಿಸಬಹುದು ಎಂಬುವುದರ ಕುರಿತು ವಿಸ್ತೃತವಾದ ಚರ್ಚೆ ನಡೆಸಲಾಯಿತು. ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಮಂಗಳೂರು ವಾರ್ಡ್ ಸಮಿತಿ ಬಳಗದ ಸಂಚಾಲಕರಾದ ಶ್ರೀ ಕಿಶೋರ್ ಅತ್ತಾವರ್ ರವರು ಮಾತನಾಡಿ ವಾರ್ಡ್ ಸಮಿತಿ ಸಭೆಗಳಲ್ಲಿ ಕುಂದುಕೊರತೆಗಳ ಬಗ್ಗೆ ಮಾತ್ರ ಚರ್ಚಿಸುವುದಲ್ಲದೆ ಸಮಿತಿ ಸದಸ್ಯರು ಹಾಗು ನಾಗರಿಕರೆಲ್ಲ ಒಟ್ಟುಗೂಡಿ ವಾರ್ಡ್ ಮಟ್ಟದ ಅಭಿವೃದ್ಧಿ ಯೋಜನೆಯ ಕುರಿತು ಚರ್ಚಿಸಬೇಕು ಮತ್ತು ಎಲ್ಲರೂ ಕೈಜೋಡಿಸಿ ವಾರ್ಡ್ ಅಭಿವೃದ್ಧಿಗೆ ಕೇಂದ್ರೀಕರಿಸಿದ ವಿನೂತನ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜನಾಗ್ರಹ ಸೆಂಟರ್ ಫಾರ್ ಸಿಟಿಝನ್ಶಿಪ್ ಅಂಡ್ ಡೆಮಾಕ್ರಸಿ ಸಂಸ್ಥೆಯ ರಾಜ್ಯ ಮುಖ್ಯಸ್ಥರಾದ ಶ್ರೀ ಸಂತೋಷ ನರಗುಂದ ರವರು ಮಾತನಾಡಿ ವಾರ್ಡ್ ಸಮಿತಿ ಸಭೆಗಳು ಪರಿಣಾಮಕಾರಿಯಾಗಲು ಜನರ ಹಾಗೂ ಜನಪ್ರತಿನಿಧಿಗಳ ನಡುವಿನ ಸಹಭಾಗಿತ್ವ ಅತಿಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜನಾಗ್ರಹ ಸಂಸ್ಥೆಯ ಶ್ರೀ ಮಂಜುನಾಥ್ ಹೆಚ್ ಎಲ್ ರವರು ಮಾತನಾಡಿ ವಾರ್ಡ್ ಸಮಿತಿ ಸಭೆಗಳು ಹೇಗೆ ನಡೆಯಬೇಕು ಮತ್ತು ವಾರ್ಡ್ ಸಮಿತಿ ಸಭೆಗಳು ಅನುಸರಿಸಬೇಕಾದ ಪ್ರಮಾಣಿತ ವಿಧಾನಗಳ ಕುರಿತು ಹಾಗೂ ನನ್ನ ನಗರ ನನ್ನ ಬಜೆಟ್ ವಿಷಯದ ಕುರಿತು ಮಾತನಾಡಿದರು. ವಾರ್ಡ್ ಸಮಿತಿ ಬಳಗದ ಅಗತ್ಯತೆಯ ಕುರಿತು ತಿಳಿಸಿದರು.

ಸಭೆಯಲ್ಲಿ ವಿವಿಧ ವಾರ್ಡ್ ಗಳಿಂದ ನಾಗರಿಕರು ಪಾಲ್ಗೊಂಡು ಮಂಗಳೂರಿನ ವಾರ್ಡ್ ಸಮಿತಿ ಸದಸ್ಯರಾಗಿ ತಮ್ಮ ಪಾತ್ರ ಮತ್ತು ಜವಾಬ್ದಾರಿಗಳ ಕುರಿತು ವಿಸ್ತೃತವಾದ ಪರಿಣಾಮಕಾರಿ ಚರ್ಚೆಯನ್ನು ನಡೆಸಿ, ಮುಂಬರುವ ದಿನಗಳಲ್ಲಿ ವಾರ್ಡ ಅಭಿವೃದ್ಧಿಯಲ್ಲಿ ಹಾಗೂ ವಾರ್ಡ್ ಸಮಿತಿ ಬಲವರ್ಧನೆಗೆ ಒಮ್ಮತದಲ್ಲಿ ಕೆಲಸ ಮಾಡಲು, ಇದರ ಜೊತೆಗೆ ಮಂಗಳೂರು ವಾರ್ಡ್ ಸಮಿತಿ ಬಳಗವನ್ನು ಇನ್ನಷ್ಟು ಬಲಪಡಿಸಲು ಮತ್ತು ತನ್ಮೂಲಕ ನಮ್ಮ ಮಂಗಳೂರನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ನಿರ್ಧಾರವನ್ನು ಕೈಗೊಂಡರು.


Spread the love