ವಿಕಲಚೇತನರಿಗೆ ಅಗತ್ಯ ಸವಲತ್ತುಗಳನ್ನು ಒದಗಿಸಲು ಜಿಲ್ಲಾಡಳಿತ ಬದ್ದ: ರವಿಕುಮಾರ್ ಎಂ.ಆರ್. 

Spread the love

ವಿಕಲಚೇತನರಿಗೆ ಅಗತ್ಯ ಸವಲತ್ತುಗಳನ್ನು ಒದಗಿಸಲು ಜಿಲ್ಲಾಡಳಿತ ಬದ್ದ: ರವಿಕುಮಾರ್ ಎಂ.ಆರ್. 

ಮಂಗಳೂರು: ಜಿಲ್ಲೆಯಲ್ಲಿರುವ ವಿಕಲಚೇತರನರಿಗೆ ಅಗತ್ಯ ಸವಲತ್ತುಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಂಪೂರ್ಣ ಸಿದ್ದ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ತಿಳಿಸಿದರು.
ಅವರು ಡಿ.3ರ ಶನಿವಾರ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಾಗೂ ಗಾಂಧಿನಗರ ಲಯನ್ಸ್ ಕ್ಲಬ್ ಮತ್ತು ಶಿಶು ಕೇಂದ್ರಿಕೃತ ಶಾಲೆಗಳ ಸಂಯುಕ್ತಾಶ್ರಯದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ ವಿಕಲಚೇತರಿಗೆ ಅಗತ್ಯವಿರುವ ಸಹಕಾರ, ಸವಲತ್ತು ನೀಡಲು ಆಡಳಿತ, ವೈಯ್ಯಕ್ತಿಕವಾಗಿ ಹಾಗೂ ಸಂಘ ಸಂಸ್ಥೆಗಳ ಮೂಲಕವೂ ತಾವು ಸಿದ್ದವಿರುವುದಾಗಿ ತಿಳಿಸಿದ ಜಿಲ್ಲಾಧಿಕಾರಿಯವರು, ಸಮಾಜದಲ್ಲಿ ಸಾಧನೆ ಮಾಡಬೇಕೆಂದರೆ ದೇಹ ಸದೃಢವಾಗಿರಬೇಕೆಂಬ ಸ್ಥಿತಿ ಇದೆ, ವಿಕಲಚೇತನರು ದೈಹಿಕ, ಮಾನಸಿಕ ಅಂಗವೈಕಲ್ಯದ ಹೊರತಾಗಿಯೂ ಅವರಲ್ಲಡಗಿರುವ ಕಲೆ- ಸಂಸ್ಕøತಿ ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ., ಉದ್ಯಮಿ ಗಣೇಶ್ ಶೆಟ್ಟಿ, ಅಶೋಕ್ ಮೊಯ್ಲಿ, ಲೋಕೇಶ್ ಹಾಗೂ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಗೋಪಾಲ ಕೃಷ್ಣ ವೇದಿಕೆಯಲ್ಲಿದ್ದರು.

ಇದೇ ಸಂದರ್ಭದಲ್ಲಿ ವಿಕಲಚೇತನರ ಏಳಿಗೆಗಾಗಿ ವಿವಿಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಕಲಚೇತನರನ್ನು ಗೌರವಿಸಲಾಯಿತು. ಗಾಲಿಕುರ್ಚಿ, ಶ್ರವಣ ಸಾಧನ ಸೇರಿದಂತೆ ವಿಕಲಚೇತನರಿಗೆ ವಿವಿಧ ಇಲಾಖೆಗಳಿಂದ ಬಿಡುಗಡೆಯಾದ ವಿವಿಧ ರೀತಿಯ ಸಲಕರಣೆಗಳನ್ನು ವಿತರಿಸಲಾಯಿತು.

ಜಿಲ್ಲಾಧಿಕಾರಿಯ ಸರಳತೆ:

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ನಗರದ ವಿಶ್ವವಿದ್ಯಾಲಯ ಕಾಲೇಜು ಆವರಣದಲ್ಲಿ ವಿಶೇಷ ಮಕ್ಕಳ ಜಾಥಾಗೆ ಚಾಲನೆ ನೀಡಿದರು.

ಜಾಥಾದಲ್ಲಿ ಹುಲಿವೇಷಧಾರಿ ವಿಶೇಷ ಮಕ್ಕಳನ್ನು ತಬ್ಬಿಕೊಂಡು ಜಿಲ್ಲಾಧಿಕಾರಿ ಭಾವುಕರಾದರು. ಬಳಿಕ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ವಿಶೇಷ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿದರು. ಈ ಸಂದರ್ಭ ತಮ್ಮ ಬಳಿಗೆ ಬಂದ ವೃದ್ದರೊಬ್ಬರಿಗೆ ಸ್ಥಳದಲ್ಲೇ ಸ್ಪಂದಿಸುವ ಮೂಲಕ ಸರಳತೆಯನ್ನು ಮೆರೆದರು.

ಶಕ್ತಿನಗರದ ಮೀರಾ ಭಟ್ ಹೆಸರಿನ ಮಹಿಳೆ ತನ್ನಿಬ್ಬರು ವಿಕಲಚೇತನ ಹೆಣ್ಣು ಮಕ್ಕಳಿಗೆ ಬರುತ್ತಿರುವ ಮಾಶಾಸನ ಹೆಚ್ಚುವರಿಯಾಗಿದ್ದರೂ ಜಾರಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ, ತಕ್ಷಣ ಸ್ಥಳದಲ್ಲೇ ಪತ್ರಕ್ಕೆ ಸಹಿ ಹಾಕಿ ತಮ್ಮ ಸಹಾಯಕರಿಗೆ ಕರೆ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಪ್ರಸಂಗವೂ ನಡೆಯಿತು.


Spread the love