ವಿಜಯ ಕೋಟ್ಯಾನ್ ಪಡು, ಬೊಳ್ಳಜಿರ ಬಿ.ಅಯ್ಯಪ್ಪ ಅವರಿಗೆ ಪ.ಗೋ ಪ್ರಶಸ್ತಿ

Spread the love

ವಿಜಯ ಕೋಟ್ಯಾನ್ ಪಡು, ಬೊಳ್ಳಜಿರ ಬಿ.ಅಯ್ಯಪ್ಪ ಅವರಿಗೆ ಪ.ಗೋ ಪ್ರಶಸ್ತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ 2019ನೇ ಸಾಲಿನ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆ ಮಂಗಳೂರಿನ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಪಡು ಮತ್ತು ಕೊಡಗಿನ ಕಾವೇರಿ ಟೈಮ್ಸ್ ಪತ್ರಿಕೆಯ ಹಿರಿಯ ವರದಿಗಾರ ಬೊಳ್ಳಜಿರ ಬಿ.ಅಯ್ಯಪ್ಪ ಆಯ್ಕೆಯಾಗಿದ್ದಾರೆ.

ಪತ್ರಕರ್ತರಾದ ವಿಜಯ ಕೋಟ್ಯಾನ್ ಪಡು ಅವರ 2019ರ ನವೆಂಬರ್ 25ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಕೊನೆಗೂ ಸಾವನ್ನೇ ಗೆದ್ದು ಬಂದ ವಿದ್ಯಾರ್ಥಿನಿ ವರದಿ ಮತ್ತು ಪತ್ರಕರ್ತ ಬೊಳ್ಳಜಿರ ಬಿ.ಅಯ್ಯಪ್ಪ ಅವರ 2019 ಜುಲೈ24ರಂದು ಕಾವೇರಿ ಟೈಮ್ಸ್ ದಿನಪತ್ರಿಕೆಯಲ್ಲಿ ಪ್ರಕಟವಾದ ಬದುಕಿಗಾಗಿ ಅಡುಗೆ ಉತ್ಪನ್ನಗಳ ತಯಾರಿಕೆಯಲ್ಲಿ ಮಗ್ನರಾಗಿರುವ ಕಾಲೂರಿನ ಸಂತ್ರಸ್ತ ಮಹಿಳೆಯರು ಎಂಬ ವರದಿ ಪ.ಗೋ. ಪ್ರಶಸ್ತಿಗೆ ಆಯ್ಕೆಯಾಗಿದೆ.

ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕಾರಾಂ ಪೂಜಾರಿ, ಮಂಗಳೂರು ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಜಯಶ್ರೀ ಬಿ.ಕದ್ರಿ ಮತ್ತು ಟೈಮ್ಸ್ ಇಂಡಿಯಾ ಪತ್ರಿಕೆಯ ನಿವೃತ್ತ ಎಜಿಎಂ ಕದ್ರಿ ನವನೀತ ಶೆಟ್ಟಿ ನೇತೃತ್ವದ ಆಯ್ಕೆ ಸಮಿತಿಯು ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 31ರಂದು ಬೆಳಗ್ಗೆ 11:00ಕ್ಕೆ ಮಂಗಳೂರು ಪತ್ರಿಕಾ ಭವನದ ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ ನಡೆಯಲಿದೆ. ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಪ್ರಶಸ್ತಿ ಪ್ರದಾನ ಮಾಡುವರು.ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಬಿ.ಎಂ , ಮಂಗಳೂರು ಡಿಸಿಪಿ ವಿನಯ.ಎ ಗಾಂವಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Spread the love