
ವಿಜಯ ಸಂಕಲ್ಪ ಯಾತ್ರೆಗೆ ಹನೂರಿನಲ್ಲಿ ಸಿದ್ಧತೆ
ಗುಂಡ್ಲುಪೇಟೆ: ಮುಂಬರುವ ವಿಧಾನಸಭೆ ಚುನಾವಣೆಯ ಸಿದ್ಧತೆ ಭಾಗವಾಗಿ ಬಿಜೆಪಿಯು ಇದೇ ಮಾರ್ಚ್ 2 ರಂದು ಮಾಜಿ ಸಿಎಂ ಯಡಿಯೂರಪ್ಪ ಮತ್ತು ತಂಡದ ವಿಜಯ ಸಂಕಲ್ಪ ಯಾತ್ರೆ ನಡೆಸುತ್ತಿದ್ದು, ಈ ಸಂಬಂಧ ಸಿದ್ಧತೆಗಳ ಕುರಿತಂತೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸೋಮಶೇಖರ್ ಮಾಹಿತಿ ನೀಡಿದರು.
ಚಾಮರಾಜನಗರ ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರದಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ನಾಲ್ಕು ತಂಡಗಳಾಗಿ ಮಾಡಲಾಗಿದ್ದು. ಮೊದಲನೇ ತಂಡ ಮಾರ್ಚ್ 1 ರಂದು ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಲಿಗರನ್ನು ಸೇರಿಸುವ ಮೂಲಕ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ನಂತರ ಅದೇ ದಿನ ಹನೂರಿನಲ್ಲಿ ನಡೆಯುವ ಸಭೆಯಲ್ಲಿ ಸುಮಾರು 15 ರಿಂದ 20 ಸಾವಿರ ಜನರು ಭಾಗವಹಿಸಲಿದ್ದಾರೆ. ಜೆಪಿ ನಡ್ಡಾ ಸಭೆಯನ್ನು ಉದ್ದೇಶಿಸಿ ಮಾತನಾಡುವರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಈಶ್ವರಪ್ಪ, ಸಚಿವರಾದ ವಿ. ಸೋಮಣ್ಣ, ವಿ ಸುನೀಲ್ ಕುಮಾರ, ಕೋಟಾ ಶ್ರೀನಿವಾಸ ಪೂಜಾರಿ, ಸಂಸದ ಶ್ರೀನಿವಾಸ್ ಪ್ರಸಾದ್, ಮಹೇಶ್, ಹಾಗೂ ರಾಜ್ಯದ ಮುಖಂಡರು ಭಾಗವಹಿಸಲಿದ್ದಾರೆ ಹಾಗೂ ಚಾಮರಾಜನಗರದಲ್ಲಿ ವಾಸ್ತವ ಹೂಡಿ ಮರುದಿನ ಗುಂಡ್ಲುಪೇಟೆಯಲ್ಲಿ ಅದ್ಧೂರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಪಟ್ಟಣದ ನೆಹರು ಪಾರ್ಕ್ (ಹಳೇ ಬಸ್ ನಿಲ್ದಾಣ)ದಲ್ಲಿ ಮಾರ್ಚ್ 2 ರಂದು ಮಧ್ಯಾಹ್ನ 1 ಗಂಟೆಗೆ ವೇದಿಕೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ ಹಾಗೂ ತಾಲೂಕಿನ ಎಲ್ಲಾ ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳು, ಗೌರವಾನ್ವಿತ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೇಳಿಕೊಂಡರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಸೋಮಶೇಖರ್, ಎಪಿಎಂಸಿ ಅಧ್ಯಕ್ಷ ಕಮರಳ್ಳಿ ರವಿ, ಮಂಡಲ ಅಧ್ಯಕ್ಷ ಜಗದೀಶ್, ಸಂಚಾಲಕರಾದ, ಮಹದೇವ ಪ್ರಸಾದ್, ನವೀನ್ ಮೌರ್ಯ, ನಂದೀಶ್, ಸೋಮಣ್ಣ ಹಾಗೂ ಮಂಜುನಾಥ್ ಇದ್ದರು.