ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ ಬಂಧಿತ ಐವರು ಜಾಮೀನಿನ ಮೇಲೆ ಬಿಡುಗಡೆ

Spread the love

ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ ಬಂಧಿತ ಐವರು ಜಾಮೀನಿನ ಮೇಲೆ ಬಿಡುಗಡೆ

ಸುರತ್ಕಲ್: ಒಂದೇ ವಾಹನದಲ್ಲಿ ಅನ್ಯ ಕೋಮಿನ ಯುವಕ ಯುವತಿಯರು ಒಟ್ಟಾಗಿ ಹೋದರು ಎಂಬ ಕಾರಣಕ್ಕೆ ಹಿಂದೂ ಸಂಘಟನೆ ಯುವಕರು ತಡೆದು ಪ್ರಶ್ನಿಸಿ, ನಿಂದಿಸಿದ ಆರೋಪದ ಮೇಲೆ ಐವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

ನಗರದ ಪ್ರತಿಷ್ಟೀತ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ  ವಿದ್ಯಾರ್ಥಿಗಳು ಸೆ.26ರಂದು ತನ್ನ ಜೀಪಿನಲ್ಲಿ ಮಲ್ಪೆ ಮತ್ತು ಮಣಿಪಾಲಕ್ಕೆ ತೆರಳಿ ಅದೇ ದಿನ ಸಂಜೆ ಸುಮಾರು 6:25ರ ವೇಳೆಗೆ ಮರಳಿ ಬರುತ್ತಿದ್ದಾಗ ಸುರತ್ಕಲ್-ಎನ್‌ಐಟಿಕೆ ಟೋಲ್‌ಗೇಟ್ ಬಳಿ ತಡೆದು ನಿಲ್ಲಿಸಿದ ದುಷ್ಕರ್ಮಿಗಳ ತಂಡವು ಜೀಪಿನಲ್ಲಿದ್ದವರ ಹೆಸರು, ವಿಳಾಸ ಕೇಳಿ ಹಲ್ಲೆ ನಡೆಸಿ ಅವಾಚ್ಯ ಶಬ್ದದಿಂದ ಬೈದು ದಾಂಧಲೆ ಸೃಷ್ಟಿಸಿತ್ತು. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲ ಸೃಷ್ಟಿಯಾಗಿತ್ತು. ಈ ಸಂದರ್ಭ ಪೊಲೀಸ್ ಇನ್‌ಸ್ಪೆಕ್ಟರ್ ಶರೀಫ್ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸದಂತೆ ತಡೆಯಲು ಪ್ರಯತ್ನಿಸಿದ್ದರು. ಪ್ರಕರಣದ ಬಗ್ಗೆ ಹಲ್ಲೆಗೊಳಗಾದ ವಿದ್ಯಾರ್ಥಿ   ಸುರತ್ಕಲ್ ಠಾಣೆಗೆ ದೂರು ನೀಡಿದ್ದರು.

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಸುರತ್ಕಲ್ ಪೊಲೀಸರು ಐವರನ್ನು ಬಂಧಿಸಿದ್ದು ವಿಚಾರಣೆ ನಡೆಸಿ ಜಾಮೀನು ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ತಿಳಿಸಿದ್ದಾರೆ.


Spread the love