ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡಬೇಕು: ಅಪ್ಪಚ್ಚು ರಂಜನ್

Spread the love

ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡಬೇಕು: ಅಪ್ಪಚ್ಚು ರಂಜನ್

ಮಡಿಕೇರಿ: ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡುವಂತೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಸಲಹೆ ನೀಡಿದ್ದಾರೆ.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಭಾಂಗಣದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ 2022-23ನೇ ಸಾಲಿನ ಪಠ್ಯೇತರ ಮತ್ತು ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಕಾಲಘಟಕ್ಕೆ ತಕ್ಕಂತೆ ತಾಜಾ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಲು ಸಹಕಾರಿಯಾಗಲಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಪಠ್ಯ ವಿಷಯದ ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಕೃಷಿ, ಕೈಗಾರಿಕೆ, ಆರ್ಥಿಕತೆ ಹೀಗೆ ಪ್ರತಿಯೊಂದು ಕ್ಷೇತ್ರದ ಬಗ್ಗೆಯು ಸಾಮಾನ್ಯ ಜ್ಞಾನ ಇರಬೇಕು. ಅದರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.

ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಪ್ರಪಂಚ ಅಭಿವೃದ್ಧಿಯತ್ತ ಸಾಗುತ್ತಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಪಡೆದುಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವತ್ತ ಗಮನಹರಿಸಬೇಕು. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪ್ರಜ್ಞೆ ಮತ್ತು ಹೆಚ್ಚಿನ ಶ್ರಮ ಇದ್ದಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ತಜ್ಞರು ಹಾಗೂ ಮಾಜಿ ಸೇನಾಧಿಕಾರಿ ಮೇಜರ್ ಡಾ.ಕುಶ್ವಂತ್ ಕೋಳಿಬೈಲು ಅವರು ಮಾತನಾಡಿ ಸಾಹಿತ್ಯ ಸಮಾಜವನ್ನು ಪರಿಚಯಿಸುತ್ತದೆ. ಪದವಿಗಳು ಉದ್ಯೋಗ ಕೊಡುತ್ತದೆ. ಹಾಗೆಯೇ ತಮ್ಮಲ್ಲಿರುವ ಪ್ರತಿಭೆಗಳು ಸಮಾಜದಲ್ಲಿ ಒಬ್ಬ ಮುಖ್ಯ ವ್ಯಕ್ತಿಯನ್ನಾಗಿ ರೂಪಿಸುವ ಕೆಲಸ ಮಾಡುತ್ತದೆ. ಹಾಗಾಗಿ ತಮ್ಮ ಪ್ರತಿಭೆಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಳ್ಳಬೇಕು ಎಂದು ಹೇಳಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಡಿ.ನಿರ್ಮಲ, ನಗರಸಭೆ ಅಧ್ಯಕ್ಷರಾದ ಅನಿತ ಪೂವಯ್ಯ, ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕರಾದ ಡಾ.ಅನುಪಮ ಸಭಾಪತಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ.ಎವರೆಸ್ಟ್ ರೊಡ್ರಿಗಸ್, ಸಾಂಸ್ಕೃತಿಕ ಸಂಚಾಲಕರಾದ ಡಾ.ಕಾವೇರಿ, ಕಾಲೇಜು ಯೂನಿಯನ್ ನಾಯಕ ನಾಯಕಿಯರು ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.


Spread the love

Leave a Reply

Please enter your comment!
Please enter your name here