ವಿದ್ಯಾರ್ಥಿಗಳು ಹಣ ಗಳಿಕೆಯೊಂದಿಗೆ ವ್ಯಕ್ತಿತ್ವ ವಿಕಸನದತ್ತ ಗಮನಹರಿಸಿ -ವಿಶ್ವವಲ್ಲಭ ತೀರ್ಥ ಸ್ವಾಮೀಜಿ

Spread the love

ವಿದ್ಯಾರ್ಥಿಗಳು ಹಣ ಗಳಿಕೆಯೊಂದಿಗೆ ವ್ಯಕ್ತಿತ್ವ ವಿಕಸನದತ್ತ ಗಮನಹರಿಸಿ -ವಿಶ್ವವಲ್ಲಭ ತೀರ್ಥ ಸ್ವಾಮೀಜಿ

ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ, ಬಂಟಕಲ್, ಉಡುಪಿ, ಇದರ 8ನೇ ವರ್ಷದ ಪದವಿ ಪ್ರದಾನ ಸಮಾರಂಭವು   ಭಾನುವಾರದಂದು ಕಾಲೇಜಿನ ಆವರಣದಲ್ಲಿ ನಡೆಯಿತು.

ಶ್ರೀ ರಾಮ ನಾಯಕ್, ಜನರಲ್ ಮ್ಯಾನೇಜರ್, ಕೆನರಾ ಬ್ಯಾಂಕ್, ಮಣಿಪಾಲ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪದವಿ ಪ್ರದಾನ ಸಮಾರಂಭದ ವಿಶೇಷ ಉಪನ್ಯಾಸ ನೀಡಿದರು. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪದವೀಧರರು ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಾದ ನಾಗರಿಕ ಸೇವಾ ಪರೀಕ್ಷೆಗಳು ಮತ್ತು ಬ್ಯಾಂಕ್ ಪರೀಕ್ಷೆಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದರು.

ಗೌರವ ಅತಿಥಿಗಳಾಗಿ ಭಾಗವಹಿಸಿದ ಮಾಹೆ ಮಣಿಪಾಲದ ಕುಲಸಚಿವರಾದ ಡಾ. ನಾರಾಯಣ ಸಭಾಹಿತ್ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ ಪದವೀಧರರು ತಮ್ಮ ವೃತ್ತಿ ಜೀವನದಲ್ಲಿ ಬರಬಹುದಾದ ಕಠಿಣ ಸವಾಲುಗಳನ್ನು ಎದುರಿಸುವಷ್ಟು ಸಧೃಢರಾಗಬೇಕು. ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗಲು ನಿರಂತರವಾಗಿ ಅಧ್ಯಯನಶೀಲರಾಗಿರಬೇಕು ಎಂದರು.

ಸಂಸ್ಥೆಯ ಅಧ್ಯಕ್ಷರಾದ ಉಡುಪಿ ಶ್ರೀ ಸೋದೆ ವಾದಿರಾಜ ಮಠದ ಪರಮಪೂಜ್ಯ ವಿಶ್ವವಲ್ಲಭತೀರ್ಥ ಶ್ರೀಪಾದರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದಲ್ಲಿ ಹಣ ಗಳಿಸುವುದರ ಜೊತೆಗೆ ತಮ್ಮ ವ್ಯಕ್ತಿತ್ವ ವಿಕಸನದತ್ತ ಗಮನಹರಿಸಬೇಕು. ವಿದ್ಯೆ, ಬುದ್ದಿ, ಧರ್ಮ, ನಡತೆ ಮುಂತಾದ ಗುಣಗಳನ್ನು ರೂಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಗಣಕಯಂತ್ರ ವಿಭಾಗದ ಪ್ರಜ್ಞಾ ಯು, ಸಿವಿಲ್ ವಿಭಾಗದ ರಿಯಾ ಸರಮನಿ ಸ್ಯಾಲಿನ್ಸ್, ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ನಮನ ಹಾಗೂ ಯಂತ್ರಶಿಲ್ಪ ವಿಭಾಗದ ನಾಗರಾಜ್ ಇವರಿಗೆ ಮಂಗಳೂರಿನ ಪ್ರತಿಷ್ಠಿತ ಮೆ| ಎಸ್. ಎಲ್. ಶೇಟ್ ಜ್ಯುವೆಲ್ಲರ್ಸ್‍ನ ಪ್ರಶಾಂತ್ ಶೇಟ್ ಮತ್ತು ಹೇಮಂತ್ ಶೇಟ್‍ರವರಿಂದ ಪ್ರಾಯೋಜಿತವಾದ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಶ್ರೀ ನಿಶಾಂತ್ ಪ್ರಭು ಕೆ. ಮತ್ತು ಕುಮಾರಿ ವೈಭವಲಕ್ಷ್ಮಿ ಇವರಿಗೆ ಉತ್ತಮ ಶೈಕ್ಷಣಿಕ ಸಾಧನೆಗಾಗಿ “ಶ್ರೀ ಮಧ್ವ ವಾದಿರಾಜ ಪ್ರಶಸ್ತಿ”ಗಳನ್ನು ನೀಡಿ ಅಭಿನಂದಿಸಲಾಯಿತು.

ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರವೀಂದ್ರ ಎಚ್.ಜೆ. ಅವರ ಮಾರ್ಗದರ್ಶನದಲ್ಲಿ ಪಿಎಚ್‍ಡಿ ಪದವಿಯನ್ನು ಪಡೆದ  ವಿಜಯ ಕುಮಾರಿ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಸಂಸ್ಥೆಯ ಕಾರ್ಯದರ್ಶಿಗಳಾದ  ರತ್ನಕುಮಾರ್ ಪದವೀಧರರನ್ನು ಅಭಿನಂದಿಸಿ, ವೃತ್ತಿಪರ ಕರ್ತವ್ಯಗಳ ಜೊತೆಗೆ ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು. ಶ್ರೀ ಸ್ವಾಮೀಜಿಯವರ ಕನಸಾದ ಮಧ್ವ ವಿಶ್ವವಿದ್ಯಾಲಯವನ್ನು ನನಸು ಮಾಡಲು ಪದವೀಧರರು ಕೈಜೋಡಿಸಬೇಕೆಂದು ಅವರು ವಿನಂತಿಸಿದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಅಂತಿಮ ವರ್ಷದ ಗಣಕಯಂತ್ರ ವಿಭಾಗದ ಗಣೇಶ್ ಹತ್ವಾರ್ ಮತ್ತು ತಂಡದವರು ತಯಾರಿಸಿದ ಸೋದೆ ಶ್ರೀ ವಾದಿರಾಜ ಮಠದ ಪಂಚಾಂಗ ಆಧಾರಿತ “ತಿಥಿ ನಿರ್ಣಯ” ಮೊಬೈಲ್ ಅಪ್ಲಿಕೇಶನ್‍ನ್ನು ಪೂಜ್ಯ ಶ್ರೀಪಾದರು ಲೋಕಾರ್ಪಣೆಗೊಳಿಸಿದರು.

ಸಂಸ್ಥೆಯ ಪ್ರಾಂಶುಪಾಲರಾದ ಡಾ| ತಿರುಮಲೇಶ್ವರ ಭಟ್ ಅತಿಥಿಗಳನ್ನು ಹಾಗೂ ಆಮಂತ್ರಿತರನ್ನು ಸ್ವಾಗತಿಸಿದರು. ಉಪಪ್ರಾಂಶುಪಾಲರಾದ ಪ್ರೊ. ಡಾ. ಗಣೇಶ್ ಐತಾಳ್ ಪ್ರಮಾಣ ವಚನವನ್ನು ಬೋಧಿಸಿದರು. ಶ್ರೀ ಸೋದೆ ವಾದಿರಾಜ ಮಠದ ದಿವಾನರಾದ ಶ್ರೀ ಶ್ರೀನಿವಾಸ ತಂತ್ರಿಗಳು ಮತ್ತು ಕಾಲೇಜಿನ ವಿವಿಧ ಶೈಕ್ಷಣಿಕ ವಿಭಾಗಗಳ ಮುಖ್ಯಸ್ಥರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯ ಡೀನ್(ಕಿಂ) ಡಾ. ಸುದರ್ಶನ್ ರಾವ್ ಚಿನ್ನದ ಪದಕ ವಿಜೇತರ ಹೆಸರನ್ನು ಘೋಷಿಸಿದರು. ಸಂಸ್ಥೆಯ ಡೀನ್ (ಖ&ಅ) ಡಾ. ವಾಸುದೇವ ವಿದ್ಯಾರ್ಥಿವೇತನ ಪಡೆದವರ ಹೆಸರನ್ನು ಘೋಷಿಸಿದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರೀನಾಕುಮಾರಿ ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಲೊಲಿಟಾ ಪ್ರಿಯಾ ಕ್ಯಾಸ್ತಲಿನೊ ಗೌರವ ಅತಿಥಿಗಳನ್ನು ಪರಿಚಯಿಸಿದರು.

ಭೌತರಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರವೀಂದ್ರ ಎಚ್.ಜೆ ವಂದನಾರ್ಪಣೆಯನ್ನು ಮಾಡಿದರು. ಕುಮಾರಿ ರಂಜನಿ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಪ್ರಾಧ್ಯಾಪಕರಾದ  ಅನಂತ ಮೋಹನ ಮಲ್ಯ ಮತ್ತು  ಹರ್ಷಿತ ಜಿ ಎಮ್ ನಿರೂಪಿಸಿದರು.


Spread the love