ವಿದ್ಯಾರ್ಥಿನಿಯರಿಂದ ಶಿಕ್ಷಕನಿಗೆ ಥಳಿತ

Spread the love

ವಿದ್ಯಾರ್ಥಿನಿಯರಿಂದ ಶಿಕ್ಷಕನಿಗೆ ಥಳಿತ

ಶ್ರೀರಂಗಪಟ್ಟಣ: ಹಾಸ್ಟೆಲ್‌ನಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಶಿಕ್ಷಕನ ವಿರುದ್ಧ ವಿದ್ಯಾರ್ಥಿನಿಯರು ಸಿಡಿದೆದ್ದು, ಕೈಗೆ ಸಿಕ್ಕಿದ ಕಬ್ಬಿನ ಜಲ್ಲೆ, ಕೋಲು ತೆಗೆದುಕೊಂಡು, ಆತನ ರೂಮಿಗೆ ನುಗ್ಗಿ ಥಳಿಸಿದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಟ್ಟೇರಿ ಎಂಬ ಗ್ರಾಮದ ಬಾಲಕಿಯರ ವಸತಿ ನಿಲಯದಲ್ಲಿ ನಡೆದಿದೆ.

ಚಿನ್ಮಯಾನಂದ ಮೂರ್ತಿ ಎಂಬಾತನೇ ವಿದ್ಯಾರ್ಥಿನಿಯರಿಂದ ಹಲ್ಲೆಗೊಳಗಾದವನು. ಈತ ಕಟ್ಟೇರಿ ಗ್ರಾಮದ ಫ್ರೌಡಶಾಲಾ ಹೆಣ್ಣು ಮಕ್ಕಳ ಸರ್ಕಾರಿ ವಸತಿ ನಿಲಯದಲ್ಲಿ ವಸತಿ ಶಾಲೆಯ ಉಸ್ತುವಾರಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ಅಲ್ಲದೆ ಹಾಸ್ಟೆಲ್ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಾ ಇದ್ದನು ಎನ್ನಲಾಗಿದೆ.  ಬುಧವಾರ ರಾತ್ರಿ ಕೂಡ ಹಾಸ್ಟೆಲ್‌ನಲ್ಲಿದ್ದ ಶಿಕ್ಷಕ ಚಿನ್ಮಯಾನಂದ ಮೂರ್ತಿ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಯೊಬ್ಬಳ ಜೊತೆ ಅಸಭ್ಯವಾಗಿ ವರ್ತಿಸಿದ್ದಾನಂತೆ. ಈ ವೇಳೆ ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಯತ್ನ ನಡೆಸಿದ್ದು, ಆಗ ಆಕೆ ಭಯದಿಂದ ಕೂಗಿ ಕೊಂಡಿದ್ದಾಳೆ.  ಈ ವೇಳೆ ಹುಡುಗಿ ಕೂಗಿಕೊಂಡಿದ್ದನ್ನು ಹಾಸ್ಟೆಲ್ ಇತರೇ ವಿದ್ಯಾರ್ಥಿನಿಯರು ಕೇಳಿಸಿಕೊಂಡಿದ್ದಾರೆ. ಅಲ್ಲಿ ಏನೋ ನಡೆಯುತ್ತಿದೆ ಎಂಬುದನ್ನು ಮನಗಂಡ ವಿದ್ಯಾರ್ಥಿನಿಯರು ಕೈಗೆ ಸಿಕ್ಕಿದ ಕಬ್ಬಿನ ಜಲ್ಲೆ, ಕೋಲುಗಳನ್ನು ತೆಗೆದುಕೊಂಡು ಶಿಕ್ಷಕ ಚಿನ್ಮಯಾನಂದ ಮೂರ್ತಿ ರೂಮಿಗೆ ನುಗ್ಗಿದ್ದಾರೆ.

ಈ ವೇಳೆ ಶಿಕ್ಷಕ ಚಿನ್ಮಯಾನಂದ ಮೂರ್ತಿ ಮೇಲೆ ವಿದ್ಯಾರ್ಥಿನಿಯರು ಹಲ್ಲೆ ನಡೆಸಿದ್ದಾರೆ. ಹೀಗೆ ಏಕಾಏಕಿ ವಿದ್ಯಾರ್ಥಿನಿಯರು ಮುಗಿ ಬೀಳುತ್ತಿದ್ದಂತೆ ಕಾಮುಕ ಶಿಕ್ಷಕ ಕಂಗಾಲಾಗಿದ್ದಾನೆ. ತನ್ನ ರೂಮಿನ ಬಾಗಿಲು ಹಾಕಿಕೊಂಡು ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದಾನೆ. ಆದರೆ ಬಾಗಿಲು ತಳ್ಳಿ ಒಳಕ್ಕೆ ನುಗ್ಗಿದ್ದ ವಿದ್ಯಾರ್ಥಿನಿಯರು ಆತನಿಗೆ ಸರಿಯಾಗಿಯೇ ಬಾರಿಸಿದ್ದಾರೆ.

ಇನ್ನು ಫ್ರೌಡಶಾಲಾ ಹೆಣ್ಣು ಮಕ್ಕಳ ವಸತಿ ನಿಲಯದಲ್ಲಿ ವಸತಿ ಶಾಲೆಯ ಉಸ್ತುವಾರಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕನ ಅಸಭ್ಯ ವರ್ತನೆ ಬಗ್ಗೆ ವಿದ್ಯಾರ್ಥಿನಿಯರು ಕೆಆರ್‌ಎಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇರೆಗೆ ಶಿಕ್ಷಕ ಚಿನ್ಮಯಾನಂದ ಮೂರ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಕೆಆರ್‌ಎಸ್ ಪೊಲೀಸರು, ಆರೋಪಿ ಶಿಕ್ಷಕನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


Spread the love