ವಿದ್ಯಾರ್ಥಿ ಜೀವನದಲ್ಲಿ ನಳಿನ್‌ ಕುಮಾರ್‌ ಕಾಂಗ್ರೆಸ್‌ ಕಾರ್ಯಕರ್ತರಾಗಿದ್ದರು, ಪಕ್ಷಕ್ಕೆ ಬರುವುದಾದರೆ ಸ್ವಾಗತ – ಖಾದರ್

Spread the love

ವಿದ್ಯಾರ್ಥಿ ಜೀವನದಲ್ಲಿ ನಳಿನ್‌ ಕುಮಾರ್‌ ಕಾಂಗ್ರೆಸ್‌ ಕಾರ್ಯಕರ್ತರಾಗಿದ್ದರು, ಪಕ್ಷಕ್ಕೆ ಬರುವುದಾದರೆ ಸ್ವಾಗತ – ಖಾದರ್
 

ಮಂಗಳೂರು: ‘ನಳಿನ್‌ಕುಮಾರ್ ಕಟೀಲ್ ವಿದ್ಯಾರ್ಥಿ ಜೀವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು. ಈಗ ಮರಳಿ ಪಕ್ಷಕ್ಕೆ ಬರುವುದಾದರೆ ಸ್ವಾಗತ ಕೋರುತ್ತೇನೆ’ ಎಂದು ಶಾಸಕ ಯು. ಟಿ. ಖಾದರ್ ಹೇಳಿದರು.

ಅವರು ನಗರದಲ್ಲಿ ಸುದ್ದಿಗೋಷ್ಠೀಯಲ್ಲಿ ಮಾತನಾಡಿ ‘ಯು.ಟಿ.ಖಾದರ್ ಮತ್ತು ರಮಾನಾಥ್ ರೈ ಹೊರತುಪಡಿಸಿ ಉಳಿದ ಕಾಂಗ್ರೆಸ್ ಮುಖಂಡರನ್ನು ಬಿಜೆಪಿಗೆ ಕರೆ ತನ್ನಿ’ ಎಂಬ ನಳಿನ್‌ಕುಮಾರ್ ಕಟೀಲ್ ಹೇಳಿಕೆ ತಿರುಗೇಟು ನೀಡಿದ ಅವರು, ‘ಕಾಂಗ್ರೆಸ್ ಕಾರ್ಯಕರ್ತರು ಒಳ್ಳೆಯವರು, ಹಾಗಾಗಿ ಒಳ್ಳೆಯವರನ್ನು ಪಕ್ಷಕ್ಕೆ ಸೇರಿಸಲು ನಳಿನ್‌ಕುಮಾರ್ ಕಟೀಲ್ ಹೇಳಿರಬಹುದು’ ಎಂದರು.

‘ನಳಿನ್‌ಕುಮಾರ್ ವಿದ್ಯಾರ್ಥಿ ಜೀವನದಲ್ಲಿದ್ದಾಗ, ಆಗ ಎನ್‌ಎಸ್‌ಯುಐನಲ್ಲಿದ್ದ ಕಾಂಗ್ರೆಸ್‌ನ ವಿನಯ್ ಕುಮಾರ್ ಸೊರಕೆ ಪರ ದುಡಿದಿದ್ದರು. ಕಾಂಗ್ರೆಸ್ ಕಾರ್ಯಕರ್ತನಾಗಿ ನಳಿನ್ ಕೆಲಸ ಮಾಡುತ್ತಿದ್ದರು. ನಳಿನ್‌ಗೆ ಈಗ ಹಿಂದಿನ ಕೆಲಸ ನೆನಪಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರ ಬದ್ಧತೆ ಹಾಗೂ ಶಕ್ತಿ ನಳಿನ್‌ಗೆ ಗೊತ್ತಿದೆ. ಹಾಗಾಗಿ ನಳಿನ್‌ಕುಮಾರ್ ಮತ್ತೆ ಪಕ್ಷಕ್ಕೆ ಬರುವುದಾದರೆ ಸ್ವಾಗತ ಕೋರುತ್ತೇನೆ’ ಎಂದು ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಗೋಕಳ್ಳತನ ಸೇರಿದಂತೆ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಚಿಕ್ಕಮಗಳೂರಿನಲ್ಲಿ ಗೋಕಳ್ಳತನ ತಡೆಯುವಲ್ಲಿ ವಿಫಲರಾದ ಗೃಹಸಚಿವರು, ಸಾರ್ವಜನಿಕವಾಗಿ ಪೊಲೀಸರನ್ನು ಬೈದು ಏನು ಪ್ರಯೋಜನ? ಪೊಲೀಸರ ನೈತಿಕತೆ ಕುಸಿಯುವಂತೆ ಮಾತನಾಡಿದರೆ, ಬಿಟ್ಟಿ ಪ್ರಚಾರ ಸಿಗುವುದು ಬಿಟ್ಟರೆ ಬೇರೇನೂ ಸಾಧ್ಯವಿಲ್ಲ ಎಂದರು.

ಈಗಲೂ ಗೋಕಳ್ಳತನ, ಗೋಹತ್ಯೆ ನಡೆಯುತ್ತದೆ ಎಂದಾದರೆ ಬಿಜೆಪಿ ಸರಕಾರ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದು ಪ್ರಯೋಜನವಾದರೂ ಏನು? ಕೇವಲ ಚುನಾವಣೆ ಗಿಮಿಕ್‌ ಗಾಗಿ ಕಾಯಿದೆ ತಂದಿದೆಯೇ ಎಂದು ಖಾದರ್ ಪ್ರಶ್ನಿಸಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಶಾಸಕರ ಕುಮ್ಮಕ್ಕಿನಿಂದ ಗೋಕಳ್ಳತನ ನಡೆಯುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿತ್ತು. ಈಗ ಯಾವ ಶಾಸಕರು ಬೆಂಬಲ ನೀಡುತ್ತಿದ್ದಾರೆ. ಗೋಕಳ್ಳರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ. ಗೋಮಾಂಸ ರಫ್ತು ಕಂಪನಿಗಳನ್ನು ಬಂದ್ ಮಾಡಿ. ಪಕ್ಕದ ಕೇರಳ, ಗೋವಾದಲ್ಲೂ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತನ್ನಿ ಎಂದು ಅವರು ಹೇಳಿದರು.


Spread the love