
ವಿದ್ಯಾರ್ಥಿ ಜೀವನ ಮನುಷ್ಯ ಬದುಕಿನ ಅತ್ಯಂತ ಸ್ವರ್ಣಮಯ ಕ್ಷಣ – ನ್ಯಾಯಮೂರ್ತಿ ಜಿಯಾದ್ ರಹಮಾನ್
ಕುಂದಾಪುರ: ವಿದ್ಯಾರ್ಥಿ ಜೀವನ ಎನ್ನುವುದು ಮನುಷ್ಯ ಬದುಕಿನ ಅತ್ಯಂತ ಸ್ವರ್ಣಮಯ ಕ್ಷಣಗಳು. ಈ ಅವಧಿಯಲ್ಲಿನ ಕನಸು, ಯೋಚನೆ ಹಾಗೂ ಬಾಂಧವ್ಯಗಳನ್ನು ಜೀವನದ ಎಲ್ಲಾ ಹಂತದಲ್ಲಿಯೂ ನೆನಪಿಸಿಕೊಳ್ಳುವುದರಿಂದ ನಮ್ಮ ಅಮೃತ ಕ್ಷಣಗಳ ಘಟನಾವಳಿಗಳು ಮತ್ತೆ ಮತ್ತೆ ನೆನಪಾಗುತ್ತದೆ ಎಂದು ಕೇರಳ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಜಿಯಾದ್ ರಹಮಾನ್ ಹೇಳಿದರು.
ಕೋಟೇಶ್ವರ ಸಮೀಪದ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ ಗೆ ಗುರುವಾರ ಭೇಟಿ ನೀಡಿದ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಲಿಯಬೇಕು ಹಾಗೂ ಒಳ್ಳೆಯ ಅಂಶಗಳನ್ನು ಗಳಿಸಬೇಕು ಎನ್ನುವುದು ವಿದ್ಯಾರ್ಥಿ ಬದುಕಿನ ಅವಿಭಾಜ್ಯ ಅಂಗ. ಈ ಜೀವನದ ಅವಧಿಯಲ್ಲಿ ನಮ್ಮೊಂದಿಗೆ ಬೆರೆಯುವ ನಮ್ಮ ಮಿತ್ರರು, ಗುರುಗಳು ಹಾಗೂ ಶಾಲಾ ಆವರಣಗಳು ನಮ್ಮೊಂದಿಗೆ ಹಲವಷ್ಟು ಬಾಂಧವ್ಯದ ನೆನಪುಗಳನ್ನು ಉಳಿಸುತ್ತವೆ. ಈ ನೆನಪುಗಳನ್ನು ಮತ್ತೆ ಮತ್ತೆ ಮೆಲುಕು ಹಾಕುವುದರಿಂದ ನಮ್ಮ ಜೀವನದ ಸುಂದರ ಕ್ಷಣಗಳು ನಮ್ಮ ಮುಂದೆ ಯಾವಾಗಲೂ ಇರುತ್ತದೆ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಅರಿವಾಗಬೇಕು. ಸಾಧಿಸುವುದು ಹಾಗೂ ಗೌರವಿಸುವುದು ವಿದ್ಯಾರ್ಥಿಗಳ ಪ್ರಥಮ ಆಯ್ಕೆಯಾಗಿರಲಿ ಎಂದು ಅವರು ಹೇಳಿದರು.
ಬಾಂಡ್ಯ ಎಜ್ಯುಕೇಶನ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕ ಟ್ರಸ್ಟಿಗಳಾದ ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ, ಅನುಪಮಾ ಎಸ್ ಶೆಟ್ಟಿ ಬಾಂಡ್ಯ, ವಿಶ್ವಸ್ಥ ರಾಜೇಶ್ ಕೆ.ಸಿ, ಗುರುಕುಲ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಅರುಣ್ ಡಿಸಿಲ್ವ ಇದ್ದರು.
ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಜಿಯಾದ್ ರಹಮಾನ್ ಅವರನ್ನು ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ ಪರವಾಗಿ ಗೌರವಿಸಲಾಯಿತು. ಗುರುಕುಲ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಬ್ಯಾಂಡ್ ಸೆಟ್ ನೊಂದಿಗೆ ಗೌರವ ರಕ್ಷೆ ನೀಡಿದರು. ವಿದ್ಯಾರ್ಥಿಗಳು ಸಮೂಹಗೀತೆಗಳನ್ನು ಹಾಡಿದರು. ಇದೇ ವೇಳೆಯಲ್ಲಿ ವಿದ್ಯಾರ್ಥಿಗಳ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಗುರುಕುಲ ಪಬ್ಲಿಲ್ ಸ್ಕೂಲ್ ನ ಪ್ರಾಂಶುಪಾಲ ಮೋಹನ್ ಕೆ ಸ್ವಾಗತಿಸಿದರು. ಶಿಕ್ಷಕಿ ಶೈನಾ ಶೆಟ್ಟಿ ವಂದಿಸಿದರು.