Home Mangalorean News Kannada News ವಿದ್ಯುತ್ ಕಂಬ ಬಿದ್ದು ಕಾರ್ಮಿಕ ಸಾವು: ನಿರ್ಲಕ್ಷ್ಯ ಆರೋಪ, ಪ್ರಕರಣ ದಾಖಲು

ವಿದ್ಯುತ್ ಕಂಬ ಬಿದ್ದು ಕಾರ್ಮಿಕ ಸಾವು: ನಿರ್ಲಕ್ಷ್ಯ ಆರೋಪ, ಪ್ರಕರಣ ದಾಖಲು

Spread the love

ವಿದ್ಯುತ್ ಕಂಬ ಬಿದ್ದು ಕಾರ್ಮಿಕ ಸಾವು: ನಿರ್ಲಕ್ಷ್ಯ ಆರೋಪ, ಪ್ರಕರಣ ದಾಖಲು

ಧರ್ಮಸ್ಥಳ: ವಿದ್ಯುತ್ ಕಂಬ ಎತ್ತುವ ವೇಳೆ ಸಂಭವಿಸಿದ ಅವಘಡದಲ್ಲಿ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ನಿರ್ಲಕ್ಷ್ಯ ಆರೋಪದಡಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.

ಪ್ರಕರಣದ ಪಿರ್ಯಾದಿದಾರರಾದ ಬೆಳ್ತಂಗಡಿ ತಾಲೂಕಿನ ಕೊಕ್ಕಡ ನಿವಾಸಿ ರಂಜಿತ್ (23) ಅವರ ದೂರಿನ ಪ್ರಕಾರ, ಅವರ ಚಿಕ್ಕಪ್ಪ ಮೃತ ಶಿವಪ್ಪ (40) ಅವರು ಕಳೆದ ಸುಮಾರು ಆರು ವರ್ಷಗಳಿಂದ ಕೊಕ್ಕಡ ನಿವಾಸಿ ಪುರುಷೋತ್ತಮ ಅವರ ಎಲೆಕ್ಟ್ರಿಕಲ್ಸ್ ಅಂಗಡಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.

ಮಾರ್ಚ್ 16, 2026ರಂದು ಸಂಜೆ ಕೊಕ್ಕಡ ಗ್ರಾಮದ ಶ್ರೀರಾಮ ಭಜನಾ ಮಂದಿರದ ಬಳಿ ವಿದ್ಯುತ್ ಕಂಬವನ್ನು ಎತ್ತುವ ಸಂದರ್ಭದಲ್ಲಿ, ಅದರ ಭದ್ರತೆಗೆ ಅಗತ್ಯವಾದ ಪರಿಕರಗಳನ್ನು ಒದಗಿಸದೇ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದ ಕಂಬವು ಶಿವಪ್ಪ ಅವರ ಮೇಲೆ ಬಿದ್ದು ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಕ್ರಮ ಸಂಖ್ಯೆ 20/2026ರಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 106 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Spread the love

Exit mobile version