ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರ ನಿಧನಕ್ಕೆ ರಾಜ್ಯ ಬಿಜೆಪಿ ಸಂತಾಪ

Spread the love

ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರ ನಿಧನಕ್ಕೆ ರಾಜ್ಯ ಬಿಜೆಪಿ ಸಂತಾಪ

ಮಂಗಳೂರು: ನಾಡಿನ ಶ್ರೇಷ್ಠ ವಿದ್ವಾಂಸ, ಖ್ಯಾತ ಪ್ರವಚನಕಾರ, ವಿದ್ಯಾ ವಾಚಸ್ಪತಿ ಮತ್ತು ಪದ್ಮಶ್ರೀ ಪುರಸ್ಕೃತರಾದ ಉಡುಪಿಯ ಬನ್ನಂಜೆ ಗೋವಿಂದಾಚಾರ್ಯರ ನಿಧನಕ್ಕೆ ಭಾರತೀಯ ಜನತಾ ಪಾರ್ಟಿ ತೀವ್ರ ಸಂತಾಪವನ್ನು ವ್ಯಕ್ತ ಪಡಿಸುತ್ತದೆ. ವೈಯಕ್ತಿಕ ನೆಲೆಯಲ್ಲಿ ಅವರೊಂದಿಗೆ ಕಳೆದ ಅನೇಕ ಅಮೂಲ್ಯ ಕ್ಷಣಗಳನ್ನು ಹಾಗೂ ಅವರ ಪ್ರವಚನಗಳನ್ನು ಧನ್ಯತೆಯ ಭಾವ ದೊಂದಿಗೆ ಸ್ಮರಿಸುತ್ತೇನೆ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.

ವಿದ್ಯಾ ವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ನಾಡಿನ ಅಗ್ರಮಾನ್ಯ ಸಂಸ್ಕೃತ ವಿದ್ವಾಂಸರು, ಭಾರತೀಯ ತತ್ವಶಾಸ್ತ್ರಗಳನ್ನು ಆಳವಾಗಿ ಅಧ್ಯಯನ ಮಾಡಿ ಸಮಕಾಲೀನ ಚಿಂತನೆಯೊಂದಿಗೆ ಜೋಡಿಸಿ ಸಮಾಜವನ್ನು ಜಾಗೃತಗೊಳಿಸಿದ ಆಚಾರ್ಯರು, ಓರ್ವ ಗುರು ಸದೃಶ ಸಂತ, ಉಡುಪಿಯ ಅಷ್ಟ ಮಠಗಳೊಂದಿಗೆ ಅನ್ಯೋನ್ಯ ಸಂಬಂಧ ಇಟ್ಟುಕೊಂಡು ಮಧ್ವ ತತ್ವದ ಪ್ರಚಾರಕ್ಕಾಗಿ ತನ್ನ ಜೀವನವನ್ನು ಸಮರ್ಪಿಸಿದ ಧೀಮಂತ ಚೇತನ. ಸಂತನಂತೆ ಬಾಳಿ, ಬದುಕಿ ಮುಂದಿನ ಪೀಳಿಗೆಗಳಿಗೆ ಆಧ್ಯಾತ್ಮ ತತ್ವ ಧಾರೆಯನ್ನು ಎರೆದ ಶಾಸ್ತ್ರಜ್ಞ, ಲೇಖಕ, ವಾಗ್ಮಿ ಹಾಗೂ ತಮ್ಮ ಪ್ರವಚನಗಳಿಂದ ನಾಡಿನೆಲ್ಲೆಡೆ ಜ್ಞಾನವನ್ನು ಪಸರಿಸಿದ ಕರ್ಮಯೋಗಿ.

ಅವರ ಅಗಲುವಿಕೆಯಿಂದ ನಾಡಿನ ಸಾರಸ್ವತ ಕ್ಷೇತ್ರ ಬಡವಾಗಿದೆ. ಅಗಲಿದ ಆತ್ಮಕ್ಕೆ ಸದ್ಗತಿಯನ್ನು ಕೊರುತ್ತಾ, ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೂ ಹಾಗೂ ಅವರ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.


Spread the love