ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ – ಸಚಿವ ಕೋಟ ಶ್ರೀನಿವಾಸ ಪೂಜಾರಿ

Spread the love

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ – ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕುಂದಾಪುರ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 13 ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ 12 ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರನ್ನು ಹೊಂದಿದೆ. ಎರಡು ಸಂಸದರಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿಯೂ ಸಾಕಷ್ಟು ಸಂಖ್ಯೆಯ ಪಕ್ಷದ ಹಾಗೂ ಪಕ್ಷದ ಬೆಂಬಲಿತ ಸದಸ್ಯರು ಇರುವುದರಿಂದ ಮುಂಬರುವ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ನಿಚ್ಚಳವಾಗಿ ಗೆಲುವು ಸಾಧಿಸುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ವ್ಯಕ್ತಪಡಿಸಿದ್ದಾರೆ.

ಇಲ್ಲಿಗೆ ಸಮೀಪದ ಹೆಮ್ಮಾಡಿಯಲ್ಲಿ ಮಂಗಳವಾರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಪಕ್ಷದ ಅಭ್ಯರ್ಥಿ ಯಾರಾಗಬೇಕು ಎನ್ನುವುದನ್ನು ಪಕ್ಷದ ಹಾಗೂ ಪಕ್ಷದ ಪ್ರಮುಖರು ತೆಗೆದುಕೊಳ್ಳುತ್ತಾರೆ. ಸ್ವಾಭಾವಿಕವಾಗಿ ಹಂಸಲೇಖ ಒಬ್ಬ ಕಲಾವಿದರು. ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಯಾರಾದರೂ ಸಾಧು-ಸಂತರು, ಅಶ್ಪಶ್ರ್ಯತೆ ನಿವಾರಣೆಗಾಗಿ, ಅಸ್ಪಶ್ರ್ಯತೆ ಇರುವ ಕೇರಿಗಳಲ್ಲಿ ಸಂಚಾರ ಮಾಡಿ, ಅವರಿಗೆ ಕೈ ಮುಟ್ಟಿ ಪ್ರಸಾದವನ್ನು ನೀಡಿ, ಹಿಂದೂ ಧರ್ಮ ಒಂದು ಎನ್ನುವ ಸಂದೇಶವನ್ನು ಜಗತ್ತಿಗೆ ಸಾರಿದವರು, ಹಿರಿಯ ಪೇಜಾವರ ಶ್ರೀಗಳು, ಅವರ ಬಗ್ಗೆ ಹಂಸಲೇಖ ಲಘುವಾಗಿ ಮಾತನಾಡಿದ್ದು, ಅವರ ಭಕ್ತಾಧಿಗಳಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ನೋವಾಗಿದೆ. ಅವರು ಈ ಕುರಿತು ಕ್ಷಮೆ ಕೇಳಿರುವುದು ನನಗೆ ಗೊತ್ತಿಲ್ಲ, ಆದರೆ ಹಂಸಲೇಖ ಅವರು ಸ್ವಾಮೀಜಿಯವರ ಬಗ್ಗೆ ಮಾತನಾಡಿರುವುದು ಖಂಡನೀಯ ಎಂದು ಸಚಿವ ಕೋಟ ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯದಲ್ಲಿನ ಕೃಷಿ ಬೆಳೆಗಳಾದ ಭತ್ತ, ಜೋಳ, ರಾಗಿ, ತೊಗರಿ ಸೇರಿದಂತೆ ಇನ್ನಿತರ ಬೇಳೆ-ಕಾಳು ಹಾಗೂ ತರಕಾರಿ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಲು ಅನುಕೂಲವಾಗುವಂತೆ ಸರ್ವೇ ಕಾರ್ಯ ನಡೆಸಲು ಸರ್ಕಾರ ಬದ್ಧವಾಗಿದೆ. ಭತ್ತಕ್ಕೆ ಬೆಂಬಲ ಬೆಲೆ ಘೋಷಣೆ ಮಾಡುವ ಕುರಿತು ಸಚಿವ ಸಂಪುಟ ಸಭೆಯ ಆರಂಭದಲ್ಲಿಯೇ ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇನೆ ಹಾಗೂ ಕೃಷಿ ಮಂತ್ರಿಗಳೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇನೆ ಎಂದರು.

ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬು ಹೆಗ್ಡೆ ತಗ್ಗರ್ಸೆ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಸದಾನಂದ ಉಪ್ಪಿನಕುದ್ರು, ಕರಣ್ ಪೂಜಾರಿ ತಲ್ಲೂರ್ ಇದ್ದರು.


Spread the love