ವಿಧಾನ ಪರಿಷತ್‌ ಚುನಾವಣೆ: ಭುಜಂಗ ಶೆಟ್ಟಿಯವರತ್ತ ರಾಜ್ಯ ಕೈ ನಾಯಕರ ಒಲವು?

Spread the love

ವಿಧಾನ ಪರಿಷತ್‌ ಚುನಾವಣೆ: ಭುಜಂಗ ಶೆಟ್ಟಿಯವರತ್ತ ರಾಜ್ಯ ಕೈ ನಾಯಕರ ಒಲವು?

ಉಡುಪಿ: ವಿಧಾನ ಪರಿಷತ್‌ ನ 25 ಸ್ಥಾನಗಳಿಗೆ ಈಗಾಗಲೇ ಆಯೋಗ ಚುನಾವಣೆ ಘೋಷಿಸಿದ್ದು ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯನ್ನು ಒಳಗೊಂಡಂತೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿ ಕಾಂಗ್ರೆಸ್‌ ಪಕ್ಷದಿಂದ ಹಲವಾರು ಮಂದಿ ಆಕಾಂಕ್ಷಿಗಳಿದ್ದರೂ ಸಹ ಹಿರಿಯ ಕಾಂಗ್ರೆಸ್‌ ನಾಯಕ ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯರಾಗಿರುವ ಭುಜಂಗ ಶೆಟ್ಟಿಯವರ ಕುರಿತು ರಾಜ್ಯ ನಾಯಕರು ಹೆಚ್ಚಿನ ಒಲುವು ತೋರಿದ್ದಾರೆ ಎನ್ನಲಾಗಿದೆ.

ಮಂಡಲ ಪಂಚಾಯತಿ ಸದಸ್ಯರಿಂದ ಹಿಡಿದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಸತತ 40 ಕ್ಕೂ ಹೆಚ್ಚು ವರ್ಷದಿಂದ ಸ್ಥಳೀಯ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಭುಜಂಗ ಶೆಟ್ಟಿ ಕಳೆದ ವಿಧಾನಪರಿಷತ್‌ ಚುನಾವಣೆಯ ಸಂದರ್ಭದಲ್ಲಿಯೇ ಆಕಾಂಕ್ಷಿಯಾಗಿದ್ದರು. ಕಳೆದ ಚುನಾವಣೆಯಲ್ಲಿ ಪ್ರತಾಪ್‌ ಚಂದ್ರ ಶೆಟ್ಟಿಯವರಿಗೆ ಟಿಕೇಟ್‌ ನೀಡಿದ ಹಿನ್ನಲೆಯಲ್ಲಿ ಹಿಂದೆ ಸರಿದ ಅವರು ಈ ಬಾರಿ ಮತ್ತೆ ತನಗೆ ಟಿಕೇಟ್‌ ಗಿಟ್ಟಿಸಿಕೊಳ್ಳುವಲ್ಲಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಭುಜಂಗ ಶೆಟ್ಟಿಯವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಮತ್ತು ವಿರೋಧ ಪಕ್ಷದ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತನಗೆ ಈ ಬಾರಿ ಪಕ್ಷ ಅವಕಾಶ ನೀಡುವಂತೆ ಕೋರಿಕೊಂಡಿದ್ದಾರೆ.

ಭುಜಂಗ ಶೆಟ್ಟಿಯವರು ಸ್ಥಳೀಯ ಸಂಸ್ಥೆಗಳ ಕುರಿತು ಉತ್ತಮ ಮಾಹಿತಿ ಹೊಂದಿದ್ದು, ಮೂರು ಬಾರಿ ಜಿಲ್ಲಾ ಪಂಚಾಯತ್‌ ಸದಸ್ಯರಾಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಸ್ಥಳೀಯ ಸಮಸ್ಯೆಗಳಿಗೆ ಧ್ವನಿಯಾಗುವ ಇಂಗಿತ ಹೊಂದಿರುವ ಅನುಭವಿ ನಾಯಕ ಅವರಾಗಿದ್ದು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹಾಗೂ ಮಾಜಿ ಸಿಎಮ್‌ ಸಿದ್ದರಾಮಯ್ಯ ಕೂಡ ಭುಜಂಗ ಶೆಟ್ಟಿಯವರ ನಾಯಕತ್ವದ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದು ಸ್ಥಳೀಯರೊಂದಿಗೆ ಬೆರೆತು ಕೆಲಸ ಮಾಡುವ ವ್ಯಕ್ತಿತ್ವದ ಭುಜಂಗ ಶೆಟ್ಟಿಯವರ ಕುರಿತು ಒಲುವು ತೋರಿಸಿದ್ದಾರೆ ಎಂದು ಹೇಳಲಾಗಿದೆ.

ಒಟ್ಟಾರೆ ಪಕ್ಷದಿಂದ ಅಧಿಕೃತವಾದ ಘೋಷಣೆ ಆಗುವ ತನಕ ಯಾರು ಅಭರ್ಥಿ ಎನ್ನುವುದು ಕುತೂಹಲವಾಗಿರಲಿದೆ ಎನ್ನುವುದು ಮಾತ್ರ ಸತ್ಯ. ಪಕ್ಷ ಅಳೆದು ತೂಗಿ ಕೊನೆಗೆ ಯಾರಿಗೆ ಮಣೆ ಹಾಕಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.


Spread the love