
ವಿವಿಧ ಗ್ರಾಮದೇವತೆಗಳ ಜಾತ್ರಾ ಮಹೋತ್ಸವ
ರಾಮನಗರ: ಮಹಾಶಿವರಾತ್ರಿ ಹಬ್ಬದ ನಿಮಿತ್ತ ಬಿಡದಿ ಹೋಬಳಿಯ ನಾನಾ ಗ್ರಾಮಗಳಲ್ಲಿ ಗ್ರಾಮದೇವತೆಗಳ ಅಗ್ನಿಕೊಂಡ ಮತ್ತು ಜಾತ್ರಾ ಮಹೋತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರಿದವು.
ಮಹಾಶಿವರಾತ್ರಿ ಜಾಗರಣೆಯ ಮರುದಿನ ಪ್ರತಿವರ್ಷವೂ ಬಿಡದಿ ಹೋಬಳಿಯ ಬಾನಂದೂರು, ಬಿಲ್ಲಕೆಂಪನಹಳ್ಳಿ ಗ್ರಾಮಗಳಲ್ಲಿ ಮಹದೇಶ್ವರಸ್ವಾಮಿಯ ಅಗ್ನಿಕೊಂಡ ಹಾಗೂ ಜಾತ್ರಾ ಮಹೋತ್ಸವಗಳು ನಡೆಯುತ್ತವೆ. ಅಂತೆಯೇ ಈ ಬಾರಿಯೂ ಸದರಿ ಗ್ರಾಮಗಳಲ್ಲಿ ಅಗ್ನಿಕೊಂಡ ಹಾಗೂ ಜಾತ್ರಾ ಮಹೋತ್ಸವಗಳು ಯಶಸ್ವಿಯಾಗಿ ಜರುಗಿದವು. ಕೇತಗಾನಹಳ್ಳಿ ಕಗ್ಗಲ್ ಬೀರೇಶ್ವರಸ್ವಾಮಿ ದೇಗುಲದ ಬಳಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬಿಡದಿಯ ಬಾನಂದೂರು ಗ್ರಾಮದಲ್ಲಿ ಮಹದೇಶ್ವರಸ್ವಾಮಿ ಅಗ್ನಿಕೊಂಡ ಮಹೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರೆವೇರಿತು. ರಾತ್ರಿ ಅಗ್ನಿಕೊಂಡಕ್ಕೆ ಗೊಲ್ಲಹಳ್ಳಿ ಮತ್ತು ಬಾನಂದೂರಿನ ಭಕ್ತರು ಯಳವಾರ ಹಾಗೂ ಟ್ರಾಕ್ಟರ್ ಸೇರಿದಂತೆ ನಾನಾ ವಾಹನಗಳ ಮೂಲಕ ಕಟ್ಟಿಗೆ(ಸೌದೆ)ಯನ್ನು ತಂದು ಒಪ್ಪಿಸಿದ್ದರು. ಭಾನುವಾರ ಬೆಳಿಗ್ಗೆ 11.30 ಗಂಟೆಗೆ ಮಹದೇಶ್ವರಸ್ವಾಮಿ ದೇಗುಲದ ಪ್ರಧಾನ ಅರ್ಚಕ ಮಹದೇವಯ್ಯ(ರಾಜಣ್ಣ) ಅವರು ಭಕ್ತಾಧಿಗಳ ಜಯಘೋಷದ ನಡುವೆ ಅಗ್ನಿಕೊಂಡವನ್ನು ಯಶಸ್ವಿಯಾಗಿ ಪ್ರವೇಶ ಮಾಡಿದರು.
ಬೆಂಗಳೂರು, ರಾಮನಗರ ಜಿಲ್ಲೆ ಸೇರಿದಂತೆ ಬಾನಂದೂರಿನ ಅಕ್ಕಪಕ್ಕದ ಗ್ರಾಮಗಳಾದ ಬಿಡದಿ, ಇಟ್ಟಮಡು, ಗೊಲ್ಲಹಳ್ಳಿ, ಜೋಗರದೊಡ್ಡಿ, ಮೇಡನಹಳ್ಳಿ, ಉರಗಹಳ್ಳಿ, ಗೋಪಹಳ್ಳಿ, ಕೊಳ್ಳಗನಹಳ್ಳಿ ಸೇರಿದಂತೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಹದೇಶ್ವರಸ್ವಾಮಿ ಅಗ್ನಿಕೊಂಡ ಪ್ರವೇಶದ ವೀಕ್ಷಣೆ ಮಾಡಿದರು. ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, ಪುರಸಭೆ ಸದಸ್ಯರಾದ ಸಿ.ಉಮೇಶ್, ಶ್ರೀನಿವಾಸ್, ಮಹಿಮಾ ಕುಮಾರ್, ಮುಖಂಡರಾದ ಎಲ್.ಚಂದ್ರಶೇಖರ್, ಅಬ್ಬನಕುಪ್ಪೆ ರಮೇಶ್, ಭಾನುಪ್ರಕಾಶ್ ಮುಂತಾದವರು ಆಗಮಿಸಿದ ಪೂಜೆ ಸಲ್ಲಿಸಿದರು.