ವಿಶ್ವಹಾವುಗಳ ದಿನಾಚರಣೆಯಂದು ಸ್ನೇಕ್ ಶ್ಯಾಮ್ ಗೆ ಸೆಲ್ಯೂಟ್!

Spread the love

ವಿಶ್ವಹಾವುಗಳ ದಿನಾಚರಣೆಯಂದು ಸ್ನೇಕ್ ಶ್ಯಾಮ್ ಗೆ ಸೆಲ್ಯೂಟ್!

ಮೈಸೂರು: ಮೈಸೂರಿನ ಸ್ನೇಕ್ ಶ್ಯಾಮ್ ಅವರ ಹೆಸರನ್ನು ಕೇಳದವರು ವಿರಳವೇ ಎನ್ನಬೇಕು. ಮೈಸೂರಿನಲ್ಲಿ ಎಲ್ಲಿಯೇ ಹಾವು ಕಾಣಿಸಲಿ ತಕ್ಷಣಕ್ಕೆ ನೆನಪಿಗೆ ಬರುವುದು ಸ್ನೇಕ್ ಶ್ಯಾಮ್.

 

ವಿಶ್ವ ಹಾವುಗಳ ದಿನಾಚರಣೆ ಸಂದರ್ಭ ಅವರ ಸೇವೆಯನ್ನು ನಾವು ಸ್ಮರಿಸಲೇ ಬೇಕಾಗಿದೆ. ಇವತ್ತು ನಮ್ಮ ಸುತ್ತಮುತ್ತ ಹಾವನ್ನು ರಕ್ಷಿಸುವವರು ಸಿಗುತ್ತಿದ್ದಾರೆ. ಇವರೆಲ್ಲರೂ ತಮ್ಮ ಹೆಸರಿನ ಮುಂದೆ ಸ್ನೇಕ್ ಸೇರಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಸ್ನೇಕ್ ಶ್ಯಾಮ್. ಇದೀಗ ಇವರು ಸುಮಾರು 85 ಸಾವಿರ ಹಾವನ್ನು ಹಿಡಿದು ರಕ್ಷಿಸಿದ ದಾಖಲೆ ಸೃಷ್ಠಿಸಿದ್ದಾರೆ.

1981 ರಿಂದ ಹಾವುಗಳನ್ನು ಹಿಡಿದು ಕಾಡಿಗೆ ಬಿಡುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿರುವ ಇವರು ಮಕ್ಕಳನ್ನು ತನ್ನ ವಾಹನದಲ್ಲಿ ಶಾಲೆಗೆ ಬಿಡುವ ಕಾಯಕ ಮಾಡುತ್ತಿದ್ದರು. ನಂತರ ಮೈಸೂರು ನಗರಪಾಲಿಕೆ ಸದಸ್ಯರಾದರು.

ಹಾವು ಹಿಡಿಯುವುದನ್ನು ಹವ್ಯಾಸ ಮಾಡಿಕೊಳ್ಳುವ ಮೂಲಕ ಸ್ನೇಕ್ ಶ್ಯಾಮ್ ಎಂದೇ ಚಿರಪರಿಚಿತರಾಗಿದ್ದಾರೆ. ಇವರ ಈ ಜನಪ್ರಿಯತೆ ಅವರನ್ನು ಮೈಸೂರು ಮಹಾನಗರಪಾಲಿಕೆ ಸದಸ್ಯನನ್ನಾಗಿ ಮಾಡಿತು.

ಮೊದಲೆಲ್ಲಾ ಹಾವುಗಳನ್ನು ಮನೆಯ ಸುತ್ತಮುತ್ತ ಕಂಡಾಗ ಜನ ಭಯಭೀತರಾಗಿ ಅದನ್ನು ಹೊಡೆದು ಸಾಯಿಸಿಬಿಡುತ್ತಿದ್ದರು. ಇದನ್ನು ನೋಡುತ್ತಿದ್ದ ಶ್ಯಾಮ್ ಅವರಿಗೆ ಹಾವುಗಳ ಮಾರಣಹೋಮವನ್ನು ತಪ್ಪಿಸುವುದು ಹೇಗೆ ಎಂಬ ಚಿಂತೆ ಕಾಡಿತ್ತು. ಅಲ್ಲದೆ ಮನೆಗೆ ಬರುವ ಹಾವುಗಳನ್ನು ಹೊಡೆದು ಕೊಲ್ಲುವ ಬದಲು ಸೆರೆ ಹಿಡಿದು ಕಾಡಿಗೆ ಬಿಟ್ಟರೆ ಹೇಗೆ ಎಂಬ ಆಲೋಚನೆಯೊಂದು ಹೊಳೆದಿತ್ತು. ಕೂಡಲೇ ಅವರು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಮುಂದಾದರು.

1981ರಿಂದಲೇ ಹಾವನ್ನು ಹಿಡಿದು ಕಾಡಿಗೆ ಬಿಡುವ ಕೆಲಸವನ್ನು ಅವರು ಆರಂಭಿಸಿದರೂ ಅದನ್ನು ನಮೂದಿಸುವ ಕಾರ್ಯವನ್ನು ಕೈಗೊಂಡಿದ್ದು 1997ರಲ್ಲಿ. ಅಲ್ಲಿಂದೀಚೆಗೆ ಅವರು ಹಾವು ಹಿಡಿಯಲು ಹೋಗುವ ಸಂದರ್ಭ ತಮ್ಮೊಂದಿಗೆ ರಿಜಿಸ್ಟರ್‌ನ್ನು ಹಿಡಿದುಕೊಂಡು ಹೋಗುತ್ತಾರೆ. ಹಾವು ಹಿಡಿದ ಬಳಿಕ ತಾವು ಹಿಡಿದ ಹಾವಿನ ಬಗ್ಗೆ, ಎಲ್ಲಿ ಹಿಡಿದಿದ್ದು ಎಂಬುವುದರ ಕುರಿತು ವಿವರವಾಗಿ ಬರೆದು ಸಂಬಂಧಿಸಿದವರಿಂದ ಸಹಿ ಪಡೆಯುತ್ತಾರೆ.

ಇವರು ಕೇವಲ ಹಾವುಗಳನ್ನು ಮಾತ್ರ ಹಿಡಿಯುವುದಲ್ಲದೆ, ಹಾವಿನ ಬಗ್ಗೆ ಜನರಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸುವ ಕಾರ್ಯಗಳನ್ನು ಮಾಡುತ್ತಾರೆ. ಶಾಲಾ ಮಕ್ಕಳಿಗೆ ಹಾವಿನ ಬಗ್ಗೆ ಉಪನ್ಯಾಸ ನೀಡಿ ಅವರಲ್ಲಿರುವ ಆತಂಕವನ್ನು ದೂರ ಮಾಡಿ ಧೈರ್ಯ ತುಂಬುವ ಕೆಲಸವನ್ನು ಕೂಡ ಮಾಡುತ್ತಾ ಬಂದಿದ್ದಾರೆ.

ಹೊಟ್ಟೆಪಾಡಿಗೆ ತನ್ನದೇ ಆದ ವೃತ್ತಿಯನ್ನು ಮಾಡುತ್ತಿರುವ ಅವರು ಪ್ರವೃತ್ತಿಯಾಗಿ ಹಾವು ಹಿಡಿಯುವ ಕಾಯಕವನ್ನು ರೂಢಿಸಿಕೊಂಡಿದ್ದಾರೆ. ಆದರೆ ಕರೆ ಬಂದ ತಕ್ಷಣ ಸ್ವಂತ ಖರ್ಚಿನಲ್ಲಿ ತೆರಳಿ ಮನೆಗಳಲ್ಲಿ ಅವಿತು ಕೊಂಡಿರುವ ಹಾವುಗಳನ್ನು ಸೆರೆಹಿಡಿಯುವುದು ಸುಲಭದ ಕೆಲಸವಲ್ಲ. ಆದರೂ ನಿಷ್ಠೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ.

ಈಗಾಗಲೇ ಇವರು ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು ನ್ಯಾಷನಲ್ ಜಿಯೋಗ್ರಫಿ ಚಾನಲ್ ಇವರ ಸಾಕ್ಷ್ಯ ಚಿತ್ರವನ್ನು ಪ್ರಸಾರ ಮಾಡಿದೆ. ಹಲವಾರು ಸಂಘ ಸಂಸ್ಥೆಗಳು ಇವರ ಕಾರ್ಯವನ್ನು ಮೆಚ್ಚಿ ಸನ್ಮಾನಿಸಿವೆ.


Spread the love