‘ವಿಷದ ಹಾವು’- ಖರ್ಗೆ ಹೇಳಿಕೆ ಕಾಂಗ್ರೆಸ್ ಹತಾಶೆಯ ಪ್ರತೀಕ: ಕ್ಯಾಪ್ಟನ್ ಗಣೇಶ್ ಕಾರ್ಣಿಕ್

Spread the love

‘ವಿಷದ ಹಾವು’- ಖರ್ಗೆ ಹೇಳಿಕೆ ಕಾಂಗ್ರೆಸ್ ಹತಾಶೆಯ ಪ್ರತೀಕ: ಕ್ಯಾಪ್ಟನ್ ಗಣೇಶ್ ಕಾರ್ಣಿಕ್

ಮಂಗಳೂರು: ಪ್ರಜಾಪ್ರಭುತ್ವದಲ್ಲಿ ಸಭ್ಯತೆಯ ಎಲ್ಲೆಯನ್ನು ಮೀರದ ಚರ್ಚೆಗಳು, ವಾಗ್ವಾದಗಳು ಸ್ವೀಕಾರಾರ್ಹವಾಗಿರುತ್ತವೆ. ಆದರೆ ಕೀಳುಮಟ್ಟದ ವೈಯಕ್ತಿಕ ನಿಂದನೆಯಂತಹ ಮಾತುಗಳು ಎಂದಿಗೂ ಸ್ವೀಕಾರಾರ್ಹವಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ನೀಡಿದ ‘ವಿಷದ ಹಾವು’ ಹೇಳಿಕೆ ಅವರ ಅತ್ಯಂತ ಕೀಳು ಮಟ್ಟದ ಅಭಿರುಚಿಯನ್ನು ಎತ್ತಿ ತೋರಿಸಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.

ಈ ಕುರಿತು ನಗರದ ವಿಭಾಗ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಖರ್ಗೆಯವರು ನೀಡಿರುವ ‘ವಿಷದ ಹಾವು’ ಎಂಬ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು. ಪ್ರಧಾನಿ ಮೋದಿಯವರ ವಿರುದ್ಧ ಪದೇ ಪದೇ ಕೀಳುಮಟ್ಟದ ವೈಯಕ್ತಿಕ ನಿಂದನೆಗಳನ್ನು ಮಾಡುತ್ತಿರುವ ಕಾಂಗ್ರೆಸ್‌ ನಾಯಕರು, ಸೋಲಿನ ಭೀತಿಯಿಂದ ಎಷ್ಟು ಹತಾಶರಾಗಿದ್ದಾರೆ ಎಂಬುದನ್ನು ಈ ಮೂಲಕ ತೋರಿಸಿಕೊಡುತ್ತಿದ್ದಾರೆ ಎಂದು ಹೇಳಿದರು.

ಇಟೆಲಿ ಮೂಲದ ಸೋನಿಯಾ ಆಂಟೋನಿಯೋ ಮೈನೋ, ರಾಹುಲ್‌ ವಿನ್ಸಿ, ರಾಬರ್ಟ್ ವಾಡ್ರಾ ಕುಟುಂಬದ ಸೊತ್ತಾಗಿರುವ ಕಾಂಗ್ರೆಸ್‌ ಪಕ್ಷ ದೇಶದ ಎಲ್ಲೆಡೆ ಅಸ್ತಿತ್ವ ಕಳೆದುಕೊಂಡಿದ್ದು, ಕರ್ನಾಟಕದಲ್ಲಿಯೂ ಕೊನೆಯುಸಿರೆಳೆಯುವ ಹಂತಕ್ಕೆ ತಲುಪಿದೆ. ಇಂತಹ ಪಕ್ಷದಲ್ಲಿ ಇದುವರೆಗೂ ಸಜ್ಜನ ರಾಜಕಾರಣಿ ಎಂದೇ ಹೆಸರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಸೋನಿಯಾ ಆಂಟೋನಿಯೋ ಮೈನೋ ಕುಟುಂಬವನ್ನು ಓಲೈಸಲು ಪ್ರಧಾನಿ ಮೋದಿಯವರ ವಿರುದ್ಧ ಅತ್ಯಂತ ಕೀಳುಮಟ್ಟದ ಶಬ್ದಗಳನ್ನು ಪ್ರಯೋಗಿಸಿದ್ದಾರೆ. ಆದರೆ ಪ್ರಧಾನಿ ಮೋದಿ ಅವರು, ತಮ್ಮ ವಿರುದ್ಧ ಕಾಂಗ್ರೆಸಿಗರು ಮಾಡಿದ ವೈಯಕ್ತಿಕ ನಿಂದನೆಗಳನ್ನೆಲ್ಲ ವಿಷಕಂಠನಂತೆ ನುಂಗಿಕೊಂಡು ದೇಶದ ಹಿತಕ್ಕಾಗಿ ಅವಿಶ್ರಾಂತವಾಗಿ ದುಡಿಯುತ್ತಿದ್ದಾರೆ ಎಂದು ಕ್ಯಾಪ್ಟನ್ ಕಾರ್ಣಿಕ್‌ ಹೇಳಿದರು.

”ಈ ಹಿಂದೆ ಪ್ರಧಾನಿ ಮೋದಿಯವರ ವಿರುದ್ಧ ಕಾಂಗ್ರೆಸಿಗರು ಬಳಸಿದ್ದ ‘ಮೌತ್‌ ಕಾ ಸೌದಾಗರ್’, ಚೋರ್, ಹಿಟ್ಲರ್‍‌, ಗಟ್ಟರ್ ಕಾ ಕೀಡಾ, ಮಾಮೂಲಿ ಚಾಯ್‌ವಾಲಾ- ಇಂತಹ ಪದಗಳು ಕಾಂಗ್ರೆಸ್‌ಗೇ ತಿರುಗುಬಾಣವಾಗಿರುವುದನ್ನು ದೇಶದ ಜನತೆ ಮರೆತಿಲ್ಲ. ಈಗ ಅಂತಹದೇ ಮತ್ತೊಂದು ಕೀಳುಮಟ್ಟದ ಪದ ಪ್ರಯೋಗವನ್ನು ಮಲ್ಲಿಕಾರ್ಜುನ ಖರ್ಗೆಯವರು ಮಾಡಿದ್ದಾರೆ. ಆ ಮೂಲಕ ಪ್ರಧಾನಿ ಮೋದಿಯವರನ್ನು ಗೌರವಿಸುವ ಆರೂವರೆ ಕೋಟಿ ಕನ್ನಡಿಗರನ್ನು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರು ಅವಮಾನಿಸಿದ್ದಾರೆ’ ಎಂದು ಕ್ಯಾ. ಕಾರ್ಣಿಕ್‌ ವಾಗ್ದಾಳಿ ನಡೆಸಿದರು.

ಇಷ್ಟು ದಿನ ಮೋದಿಯವರನ್ನು ಕೀಳು ಅಭಿರುಚಿಯ ಶಬ್ದಗಳಿಂದ ಟೀಕಿಸುವ ಗುತ್ತಿಗೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಡೆದಿದ್ದರು. ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್‌ ಅಧ್ಯಕ್ಷರಾದ ಬಳಿಕ ತಮ್ಮ ಸ್ವಭಾವಕ್ಕೆ ವಿರುದ್ಧವಾಗಿ ಪ್ರಧಾನ ಮಂತ್ರಿಗಳನ್ನು ಕೆಟ್ಟ ಶಬ್ದಗಳಿಂದ ಟೀಕಿಸುವ ಮೂಲಕ ಮುಖ್ಯಮಂತ್ರಿ ಹುದ್ದೆಗೆ ತಾನೂ ಒಬ್ಬ ಆಕಾಂಕ್ಷಿ ಎನ್ನುವ ಇಂಗಿತ ವ್ಯಕ್ತಪಡಿಸಿದ್ದಾರೆ. ನಾಡಿನ ಜನತೆಯಿಂದ ತಿರಸ್ಕೃತಗೊಂಡಿರುವ ಕಾಂಗ್ರೆಸ್‌ ಹತಾಶೆಯ ಪರಮಾವಧಿಗೆ ತಲುಪಿದೆ. ಮೊನ್ನೆಯಷ್ಟೇ ಮಂಗಳೂರಿನಲ್ಲಿ ನಡೆದ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಸಭೆಯಲ್ಲಿ 250 ಮಂದಿಯೂ ಸೇರದೆ ಇರುವುದು ಅವರನ್ನು ಹತಾಶೆಯ ಕೂಪಕ್ಕೆ ತಳ್ಳಿದೆ. ಆದರೆ ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ವರ್ಚುವಲ್ ಸಭೆಯಲ್ಲಿ 50 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿರುವುದು ಅವರ ಜನಪ್ರಿಯತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಕ್ಯಾ. ಕಾರ್ಣಿಕ್ ನುಡಿದರು.

ವಾರಂಟಿ ಮುಗಿದ ಕಾಂಗ್ರೆಸ್ ಗ್ಯಾರಂಟಿ:
ಸ್ವತಃ ಕಾಂಗ್ರೆಸ್ ಪಕ್ಷವೇ ದೇಶದ ಜನರಿಂದ ತಿರಸ್ಕೃತಗೊಂಡು ವಾರಂಟಿ ಕಳೆದುಕೊಂಡಿದೆ. ಅಂತಹ ಪಕ್ಷ ಇದೀಗ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿಗಳ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚಲು ಮುಂದಾಗಿದೆ. ಕಾಂಗ್ರೆಸ್‌ ಬಂದರೆ ಭಯೋತ್ಪಾದನೆ ಗ್ಯಾರಂಟಿ, ಭ್ರಷ್ಟಾಚಾರ ಗ್ಯಾರಂಟಿ, ದೇಶದ್ರೋಹಿ ಶಕ್ತಿಗಳ ವಿಜೃಂಭಣೆ ಗ್ಯಾರಂಟಿ, ದೇಶದ ಜನರನ್ನು ಒಡೆದಾಳುವುದು ಗ್ಯಾರಂಟಿ ಅಷ್ಟೆ. ಇಂತಹ ಗ್ಯಾರಂಟಿಗಳು ಬೇಕೆ? ಅಥವಾ ಪ್ರಧಾನಿ ಮೋದಿ ನೇತೃತ್ವದ ಅಭಿವೃದ್ಧಿಪರ ನೀತಿಗಳು, ಅಮೃತ ಕಾಲದಲ್ಲಿ ಭಾರತವನ್ನು ಜಗತ್ತಿನಲ್ಲೇ ನಂಬರ್ ಒನ್ ಸ್ಥಾನಕ್ಕೆ ಏರಿಸುವ ದೂರದೃಷ್ಟಿಯ ರಾಜಕಾರಣ ಬೇಕೆ? ಎಂಬುದನ್ನು ನಾಡಿನ ಜನತೆ ತೀರ್ಮಾನಿಸುತ್ತಾರೆ ಎಂದು ಕ್ಯಾ. ಕಾರ್ಣಿಕ್ ಹೇಳಿದರು.

ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗೆ ಖಂಡನೆ:
ವರುಣ ಕ್ಷೇತ್ರದಲ್ಲಿ ಗುರುವಾರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರು ಹಲ್ಲೆ ನಡೆಸಿರುವುದನ್ನು ಕ್ಯಾ. ಕಾರ್ಣಿಕ್ ಖಂಡಿಸಿದರು. ಗುರುವಾರ ಬಿಜೆಪಿ ಕಾರ್ಯಕರ್ತರು ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಅಣ್ಣನ ಮನೆಯ ಮುಂದೆ ಸಾಗುತ್ತಿದ್ದಾಗ ಅವರ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಹಲ್ಲೆ ನಡೆದಿತ್ತು.

100ನೇ ಆವೃತ್ತಿಯ ಮನ್‌ ಕೀ ಬಾತ್‌ ಆಲಿಸಲು ವ್ಯಾಪಕ ವ್ಯವಸ್ಥೆ:
ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯಂತ ಜನಪ್ರಿಯವಾದ ಮನ್‌ ಕೀ ಬಾತ್‌ 100ನೇ ಸಂಚಿಕೆ ಏ.30ರ ಭಾನುವಾರ ಪ್ರಸಾರವಾಗಲಿದ್ದು, ಅದನ್ನು ಪ್ರತಿ ಬೂತ್‌ಗಳಲ್ಲಿ ಆಲಿಸಲು ವ್ಯಾಪಕ ವ್ಯವಸ್ಥೆ ಮಾಡಲಾಗಿದೆ ಎಂದು ಕ್ಯಾ. ಕಾರ್ಣಿಕ್ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಜಗದೀಶ್ ಶೇಣವ, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ರತನ್ ರಮೇಶ್ ಪೂಜಾರಿ ಮತ್ತು ಜಿಲ್ಲಾ ಮಾಧ್ಯಮ ಸಂಚಾಲಕ ರಣದೀಪ್ ಕಾಂಚನ್ ಉಪಸ್ಥಿತರಿದ್ದರು.


Spread the love