ವಿಷ್ಣುವರ್ಧನ್ ಕರ್ನಾಟಕ ರತ್ನ ಅಲ್ಲವೇ?: ಅಭಿಮಾನಿಗಳ ಪ್ರಶ್ನೆ

Spread the love

ವಿಷ್ಣುವರ್ಧನ್ ಕರ್ನಾಟಕ ರತ್ನ ಅಲ್ಲವೇ?: ಅಭಿಮಾನಿಗಳ ಪ್ರಶ್ನೆ

ಮೈಸೂರು: ಮಾನಂದವಾಡಿ ರಸ್ತೆಯ ಹಾಲಾಳು ಗ್ರಾಮದ ಉದ್ಬೂರ್ ಗೇಟ್ ಬಳಿ ನಿರ್ಮಿಸಿರುವ ವಿಷ್ಣುವರ್ಧನ್ ಸ್ಮಾರಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಬಳಿಕ ಸ್ಮಾರಕದಲ್ಲಿ ನಿರ್ಮಿಸಿರುವ 6.5 ಅಡಿ ಎತ್ತರದ ವಿಷ್ಣುವರ್ಧನ್ ಪ್ರತಿಮೆಯನ್ನೂ ಅನಾವರಣಗೊಳಿಸಲಾಯಿತು.

ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ವೇದಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುತ್ತಿದ್ದಂತೆ ಸಾಹಸಸಿಂಹ ವಿಷ್ಣುವರ್ಧನ್ ಅವರು ಕರ್ನಾಟಕ ರತ್ನ ಅಲ್ಲವೇ ಎಂಬ ಪ್ಲೆಕಾರ್ಡ್ ಹಿಡಿದು ಅಭಿಮಾನಿಗಳು ಘೋಷಣೆ ಕೂಗಿದರು. ನಟ ಅನಿರುದ್ ಭಾಷಣ ಮಾಡುತ್ತಿದ್ದರೂ ಘೋಷಣೆ ನಿಲ್ಲಿಸಲಿಲ್ಲ. ಬಳಿಕ ಸಿಎಂ ಬೊಮ್ಮಾಯಿ ಅವರು ಭಾಷಣ ಆರಂಭಿಸಿದಾಗಲೂ ಘೋಷಣೆ ಮುಗಿಲು ಮುಟ್ಟಿತು. ಅಭಿಮಾನಿಗಳ ಮನದಾಳ ಅರಿತ ಬೊಮ್ಮಾಯಿ ಅವರು, ನಿಮ್ಮ ಆಸೆ ಏನೆಂಬುದು ಅರ್ಥವಾಗಿದೆ. ಮುಂಬರುವ ದಿನಗಳಲ್ಲಿ ಸರ್ಕಾರ ನಿಮ್ಮ ಭಾವನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು. ಆದರೆ, ಭಾಷಣ ಮುಗಿಸಿ ಕಾರ್ಯಕ್ರಮದಿಂದ ತೆರಳಿದರು. ಇದರಿಂದಾಗಿ ಭಾರತಿ, ಅನಿರುದ್ ಅವರನ್ನು ಬಿಟ್ಟು ಇಡೀ ವೇದಿಕೆಯೇ ಖಾಲಿಯಾಯಿತು.

ತಮ್ಮ ನೆಚ್ಚಿನ ನಟ ವಿಷ್ಣುವರ್ಧನ್ ಸ್ಮಾರಕ ವೀಕ್ಷಣೆಗೆಂದು ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು. ಆದರೆ, ಯಾವುದೇ ಸಿದ್ಧತೆ ಮಾಡಿಕೊಳ್ಳದ ಕಾರಣ ಸ್ಮಾರಕ ವೀಕ್ಷಣೆಗೆ ಅವಕಾಶ ನೀಡದೆ ಗೇಟ್‌ಗೆ ಬೀಗ ಹಾಕಿದರು. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಗೇಟ್ ಮುಂಭಾಗ ಜಮಾಯಿಸಿ ಘೋಷಣೆ ಕೂಗಿದರು. ಕೆಲವರು ಗೇಟ್ ಮೇಲತ್ತಲು ಪ್ರಯತ್ನಿಸಿದರು. ಮನವೊಲಿಸಲು ಯತ್ನಿಸಿದರೂ ಕೇಳಲಿಲ್ಲ. ಈ ವೇಳೆ ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಕೊನೆಗೆ ಅವರ ಒತ್ತಾಯಕ್ಕೆ ಮಣಿದು ಸ್ಮಾರಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು.


Spread the love